ಗದಗ ಜಿಲ್ಲೆಯಾದ್ಯಂತ ಮಳೆಗೆ ಜನಜೀವನ ಅಸ್ತವ್ಯಸ್ತ!

KannadaprabhaNewsNetwork |  
Published : Aug 19, 2025, 01:00 AM IST
ನಿರಂತರ ಸುರಿಯುತ್ತಿರುವ ಮಳೆಗೆ ರಸ್ತೆ ಕೊಚ್ಚಿ ಹೋಗಿರುವುದು. | Kannada Prabha

ಸಾರಾಂಶ

ಕಳೆದೊಂದು ತಿಂಗಳಿನಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಹೇಶ ಛಬ್ಬಿ

ಗದಗ: ಕಳೆದೊಂದು ತಿಂಗಳಿನಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಗದಗ ಗ್ರಾಮೀಣ, ನರಗುಂದ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ರೋಣ, ಲಕ್ಷ್ಮೇಶ್ವರ ತಾಲೂಕಿನಾದ್ಯಂತ ನಿರಂತರ ವಿಪರೀತ ಶೀತಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಮಲೆನಾಡ ವಾತಾವರಣ ನಿರ್ಮಾಣವಾಗಿದೆ.

ಆಶ್ಲೇಷಾ ಮಳೆ ಬಳಿಕ ಮಾಘ ಆ. 17ರಿಂದ ಪ್ರತಿ ದಿನ ಬಿಟ್ಟು ಬಿಡದೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ವಿಪರೀತ ತಂಪುಗಾಳಿ ಬೀಸುತ್ತಿದ್ದು ಜಿಲ್ಲೆಯೇ ಜನತೆ ಮನೆ ಬಿಟ್ಟು ಆಚೆ ಬರದಂತಾಗಿ, ಮಕ್ಕಳು, ವಯೋವೃದ್ಧರು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ.

ಹದಗೆಟ್ಟ ರಸ್ತೆಗಳು: ನಗರದ ರಸ್ತೆಗಳು ಸೇರಿದಂತೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು ರಸ್ತೆಗಳಲ್ಲಿ ಮೊಣಕಾಲುದ್ದು ತಗ್ಗು-ಗುಂಡಿಗಳು ಬಿದ್ದು ವಾಹನ ಸವಾರರಿಗೆ ಯಮ ಸ್ವರೂಪಿಯಾಗಿ, ಕೈಯಲ್ಲಿ ಜೀವ ಹಿಡಿದು ಸಂಚರಿಸುಂವತಾಗಿದೆ. ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದ್ದು, ಮಹಿಳೆಯರು, ಮಕ್ಕಳು, ವಯೋವೃದ್ಧರು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದು ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬೆಳೆಗಳು ಜಲಾವೃತ: ನಿತ್ಯ ಸುರಿಯುತ್ತಿರುವ ಮಳೆಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ಗೋವಿನ ಜೋಳ, ಬಿಟಿ ಹತ್ತಿ ಇನ್ನಿತರ ಬೆಳೆಗಳು ಜಲಾವೃತಗೊಂಡಿದ್ದು, ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ.

ಈಗಾಗಲೇ ಕಟಾವಿನ ಹಂತಕ್ಕೆ ಬಂದಿರುವ ಹೆಸರು ಮಳೆ ನೀರಲ್ಲಿ ನಿಂತಿದ್ದು, ಬೆಳೆ ರಕ್ಷಣೆ ಕಷ್ಟ ಸಾಧ್ಯ ಎನ್ನುವಂತಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಹೆಸರು ಸಂಪೂರ್ಣ ನಾಶವಾಗಿ, ರೈತರ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತದೆ, ಸಾಲ ಸೂಲ ಮಾಡಿ ಬೆಳೆದ ಬೆಳೆಯುವ ಕಟಾವಿನ ಹಂತಕ್ಕೆ ಬಂದು ನಿಂತ ಬೆಳೆಯುವ ಸಂಪೂರ್ಣ ನೀರಲ್ಲಿ ನಿಂತು ನಾಶವಾಗುತ್ತಿರುವುದನ್ನು ಕಂಡ ರೈತರ ಕಣ್ಣಂಚಲ್ಲಿ ನೀರು ತುಂಬಿ ಬರುತ್ತದೆ, ಕಷ್ಟಪಟ್ಟು ಹೊಲದಲ್ಲಿ ದುಡಿದು ಬೆಳೆದ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣ ನಾಶವಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದುಡಿದೆ.

ಬೆಳೆ ಪರಿಹಾರಕ್ಕೆ ಆಗ್ರಹ: ನಿರಂತರ ಮಳೆಯಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆದ ಬೆಳೆಗಳು ತೇವಾಂಶ ಹೆಚ್ಚಾಗಿ ನಾಶವಾಗುತ್ತಿವೆ. ಕಳೆದೆರಡು ವರ್ಷದಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ಕೈಗೆ ಬಾರದಂತಾಗಿದ್ದು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ನಾಶವಾಗುತ್ತಿವೆ. ಸರ್ಕಾರ ರೈತರ ಸಂಕಷ್ಟವನ್ನು ಅರಿತು ಕೂಡಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುತ್ತಣ್ಣ ಕತ್ತಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ