ಗುತ್ತಲ: ಗಂಗಾಮತ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪಕ್ಷಾತೀತವಾಗಿ ಗಂಗಾಮತ ಸಮಾಜದ ಶಾಸಕರು, ಸಂಸದರು ಜನಪ್ರತಿ ನಿಧಿಗಳು ಒಗ್ಗಟ್ಟಾಗಿ ಪ್ರಯತ್ನಿಸಬೇಕೆ ಹೊರತು ಇದರಲ್ಲೂ ರಾಜಕೀಯ ಮಾಡಬಾರದು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡ ಜಲಸಾರಿಗೆ ಸಚಿವ ಮಂಕಾಳು ವೈದ್ಯ ಹೇಳಿದರು.
ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.
ವಿಧಾನ ಸಭಯೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಗುರುಪೀಠದ ಅಭಿವೃದ್ಧಿಗೆ ಮುಖ್ಯ ಮಂತ್ರಿಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೆ ಪ್ರಯತ್ನಿಸುವೆ. ಈಗಾಗಲೇ ಈ ಪೀಠದ ನದಿ ಪಾತ್ರದ ಪ್ರದೇಶದಲ್ಲಿ ತಡೆ ಗೋಡೆ ನಿರ್ಮಾಣಕ್ಕೆ 3 ಕೋಟೆ ರು. ಮಂಜೂರಿ ಮಾಡಲಾಗಿದೆ. 150 ಕೋಟೆ ರು. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ಶೇಖರಿಸುವ ನಿಟ್ಟಿನಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಸಹ ದೊರೆತು ಕೆಲಸ ಆರಂಭವಾಗಬೇಕಿದೆ. ಇದರಿಂದ ಜನರಿಗೆ ಕುಡಿಯಲು ನೀರು ದೊರೆಯುವುದಲ್ಲದೆ ರೈತರ ಬೆಳೆಗಳಿಗೆ ಸದಾಕಾಲ ನೀರುದೊರೆಯುತ್ತದೆ ಎಂದ ಅವರು ನಿಜ ಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗೆ ಕೆಲ ಸಮಸ್ಯೆ ಉದ್ಭವಿಸಿದ್ದು ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿ ಅದನ್ನು ಸಹ ಆದಷ್ಟು ಬೇಗ ಅಭಿವೃದ್ಧಿ ಪಡಿಸಲು ಶ್ರಮಿಸುವೆ ಎಂದರು.ಶಿರಹಟ್ಟಿಯ ಭಾವಕ್ಯತಾ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಅಂಬಿಗರ ಸಮಾಜದ ಹಿಂದೆ ನಾನು ಸದಾ ಕಾಲ ಇದ್ದೇ ಮುಂದೆಯೂ ಇರುತ್ತೇನೆ. ಪ್ರಸ್ತುತ ಇರುವ ಪೀಠಾಧಿಪತಿ ಶಾಂತಭೀಷ್ಮಚೌಡಯ್ಯಸ್ವಾಮಿಜಿ ಈ ಪೀಠಕ್ಕೆ ನೇಮಕವಾಗುವ ಮುನ್ನ ತಮ್ಮ ಪೂರ್ವಾಶ್ರಮದ ಗ್ರಾಮಗಳ ಸುತ್ತಲೂ ಸಹ ವ್ಯಸನಮುಕ್ತ ಸಮಾಜದ ಹೋರಾಟ ಕೈಗೊಂಡವರು. ಇವರ ಈ ಪೀಠಕ್ಕೆ ಬಂದಾಗಿನಿಂದ ಈ ಪೀಠವನ್ನು ನಿರಂತರವಾಗಿ ಒಗ್ಗೂಡಿಸುತ್ತಿದ್ದು ಪೀಠವನ್ನು ಅಭಿವೃದ್ಧಿ ಪಡಿಸುವಲ್ಲಿ ನಿತ್ಯವೂ ಶ್ರಮಿಸುತ್ತಿದ್ದಾರೆಂದರು.
ಇದಕ್ಕೂ ಮುನ್ನ ಮಾತನಾಡಿದ ವಿಪ ಸದಸ್ಯ ಸಾಬಣ್ಣ ತಳವಾರ, ಸಮಾಜವನ್ನು ಪ.ಜಾತಿಗೆ ಸೇರಿಸುವ ಫೈಲ್ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 2023ರಲ್ಲಿಯೇ ಬಂದಿದ್ದು ಅದು ಇಲ್ಲಿಯೇ ಉಳಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು. ರಾಜ್ಯದಲ್ಲಿ ನಮ್ಮ ಗಂಗಾಮತ ಸಮಾಜದ ಜನಸಂಖ್ಯೆಗೆ ಕನಿಷ್ಠ 10-25 ಜನರು ಶಾಸಕರಾಗಬೇಕಿತ್ತು. ಆದರೆ ನಮಗೆ ರಾಜಕೀಯ ಪ್ರಾತಿನಿದ್ಯ ಸಹ ಸರಿಯಾಗಿ ದೊರೆಯುತ್ತಿಲ್ಲ ಎಂದ ಅವರು ಸಮಾಜವನ್ನು ಎಸ್ಟಿಗೆ ಸೇರಿಸುವ 30 ವರ್ಷಗಳಿಂದ ನಿರಂತರಾಗಿ ಹೋರಾಟ ಮಾಡುತ್ತಿದ್ದರೂ ಸಹ ನಮ್ಮ ಬೇಡಿಕೆ ಈಡೇರಿಲ್ಲ ಎಂದರು.ಸಾನಿಧ್ಯ ವಹಿಸಿದ್ದ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗೆ ವಿವಿಧ ಗ್ರಾಮಗಳ ಜನರು, ಜನ ಪ್ರತಿ ನಿಧಿಗಳು ಸನ್ಮಾನಿಸಿದರು. ನಂತರ 10ನೇ ಪೀಠಾರೋಹಣ ಅಂಗವಾಗಿ ರುದ್ರಾಕ್ಷಿ ಕಿರೀಟ ಧಾರಣೆ ಮಾಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ಕೃಷ್ಣಾ ನಾಯ್ಕ್, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಹರ್ಷಿ ಭಗೀರಥ ಗುರುಪೀಠದ ಡಾ. ಪುರುಷೋತ್ತಮನಂದಪುರಿ ಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಬಿ. ಕುರವತ್ತಿಗೌಡರ, ಬಿಜೆಪಿ ಮುಖಂಡರಾದ ಗವಿಸಿದ್ಧಪ್ಪ ದ್ಯಾಮಣ್ಣನವರ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮುತ್ತಣ್ಣ ಯಲಿಗಾರ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ದರ್ಶನಕುಮಾರ ಲಮಾಣಿ, ಹೊಸರಿತ್ತಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ಅಂಬಿಗೇರ, ಬಸವರಾಜ ಕಳಸೂರ, ಪ್ರಕಾಶ ಅಂಬಿಗೇರ, ದತ್ತಾತ್ರೇಯ ಭಂಗಿ ಸೇರಿದಂತೆ ಅನೇಕರಿದ್ದರು. ಮಾಜಿ ಸಚಿವ ಪ್ರಮೋದ ಮಧ್ವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಆಲೂರ ಕಾರ್ಯಕ್ರಮ ನಿರ್ವಹಿಸಿದರು.