ಹುಬ್ಬಳ್ಳಿ:
ಶ್ರೀಸಿದ್ಧಾರೂಢ ಸಾಮೀಜಿ ಅವರು ಅಡಿಗಲ್ಲು ಹಾಕಿದ್ದ ದಿ. ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ ಇಂದು ಲಕ್ಷಾಂತರ ಜನರ ಆರೋಗ್ಯ ಸಂಜೀವಿನಿಯಾಗಿ ಬೆಳೆದಿರುವುದು ಸಂತಸದ ಸಂಗತಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಅವರು ನಗರದ ಶ್ರೀಸಿದ್ಧಾರೂಢರ ಮಠದ ಆವರಣದಲ್ಲಿ ಸೋಮವಾರ ದಿ. ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ, ಕೆಎಲ್‌ಇ ಜೆಜಿಎಂಎ ಮೆಡಿಕಲ್ ಕಾಲೇಜು ಹಾಗೂ ಹುಬ್ಬಳ್ಳಿ ಶ್ರೀಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಿದ್ಧಾರೂಢ ಸ್ವಾಮೀಜಿ ಅವರಿಂದ 1923ರಲ್ಲಿ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈ ಆಸ್ಪತ್ರೆಗೆ ಶಂಕರಣ್ಣ ಮುನವಳ್ಳಿ ಸೇರಿದಂತೆ ಅನೇಕರು ಕಾಯಕಲ್ಪ ಕಲ್ಪಿಸಿದ್ದಾರೆ. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಮಾತ್ರವಲ್ಲದೇ ಔಷಧಿಯನ್ನೂ ಪೂರೈಸಲಾಗುತ್ತಿದೆ ಎಂದರು.ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, 1923ರಲ್ಲಿ ಶ್ರೀ ಸಿದ್ಧಾರೂಢರು ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದಾರೆ. ಇದೊಂದೇ ಕಾರಣಕ್ಕೆ ಆಸ್ಪತ್ರೆ ಈವರೆಗೂ ಉಳಿದುಕೊಂಡಿದೆ. ಹೀಗಾಗಿ, ಡಾ. ಪ್ರಭಾಕರ ಕೋರೆ ಅವರು ಸುತ್ತಮುತ್ತಲಿನ ಜನತೆಗೆ ಉಚಿತ ಚಿಕಿತ್ಸೆಗೆ ಆದ್ಯತೆ ನೀಡಿದ್ದಾರೆ ಎಂದರು.
ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಲಿಂಗರಾಜ ಪಾಟೀಲ, ಶ್ರೀ ಮಠದ ಟ್ರಸ್ಟ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ ಮಾತನಾಡಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಅವರ ಜನ್ಮದಿನದ ನಿಮಿತ್ತ ಆಸ್ಪತ್ರೆಯಿಂದ ಹಾಗೂ ಶ್ರೀಮಠದಿಂದ ಸನ್ಮಾನಿಸಲಾಯಿತು.ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ವಿಜಯ ಶೆಟ್ಟರ, ಸರ್ವಮಂಗಳಾ ಪಾಠಕ, ಡಾ. ಗೋವಿಂದ ಮಣ್ಣೂರ, ಜಿ.ಎಸ್. ನಾಯಕ, ಬಾಳು ಮಗಜಿಕೊಂಡಿ, ಮಂಜುನಾಥ ಮುನವಳ್ಳಿ, ಚೆನ್ನವೀರಪ್ಪ ಮುಂಗರವಾಡಿ, ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಸೇರಿದಂತೆ ಹಲವರಿದ್ದರು. ಅಕ್ಕಮ್ಮಾ ಬಾಗೇವಾಡಿ ಹಾಗೂ ವಂದನಾ ಪ್ರಾರ್ಥಿಸಿದರು. ಡಾ. ವೈ.ಎಫ್. ಹಂಜಿ ವಂದಿಸಿದರು.