ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಾಂಬಾರ ಮಂಡಳಿ ಹಾಗೂ ಕೊಡ್ಲಿಪೇಟೆ ಹೇಮಾವತಿ ರೋಟರಿ ಕ್ಲಬ್ ಮತ್ತು ಪ್ಲಾಂಟರ್ಸ್ ರಿಕ್ರಿಯೇಷನ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕೊಡ್ಲಿಪೇಟೆ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ರೈತರಿಗೆ ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ದೋಣಿಗಲ್ ಐ.ಸಿ.ಆರ್.ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ.ಕೆ.ಎನ್. ಹರ್ಷ ಕಾಳುಮೆಣಸು ಬೆಳೆ, ನಿರ್ವಹಣೆ, ಗೊಬ್ಬರ, ಔಷಧಿ ಸಿಂಪಡಣೆ, ಮಳೆಯಾಧರಿತ ಮತ್ತು ನೀರಾವರಿಯಾಧರಿತವಾಗಿ ಮೆಣಸು ಬೆಳೆಯುವ ವಿಧಾನ, ಫಲವತ್ತಾದ ಮಣ್ಣಿನಲ್ಲಿ ಗುಣಮಟ್ಟದ ಕಾಳುಮೆಣಸು ಬೆಳೆಯುವ ಕುರಿತು ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಸವಿಸ್ತಾರವಾಗಿ ಬೆಳೆಗಾರರಿಗೆ ತರಬೇತಿ ನೀಡಿದರು.ಕಾರ್ಯಾಗಾರದಲ್ಲಿ ಸಕಲೇಶಪುರದ ಸಾಂಬಾರ ಮಂಡಳಿಯ ಹಿರಿಯ ಕ್ಷೇತ್ರಾಧಿಕಾರಿ ಕುಮಾರ್, ಯಸಳೂರು ಸಸ್ಯಪಾಲನ ಕೇಂದ್ರದ ವ್ಯವಸ್ಥಾಪಕ ರಮೇಶ್ ನಾಯಕ್, ಸಾಂಬಾರ ಮಂಡಳಿಯ ಉಪ ನಿರ್ದೇಶಕ ಎಂ.ವೈ. ಹೊನ್ನೂರು ಬೆಳೆಗಾರರಿಗೆ ತರಬೇತಿ ನೀಡಿದರು. ಕಾರ್ಯಗಾರವನ್ನು ಹೇಮಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಮೃತ್ ಕುಮಾರ್ ಉದ್ಘಾಟಿಸಿ ಕಾರ್ಯಾಗಾರದ ಉದ್ದೇಶದ ಕುರಿತು ಮಾತನಾಡಿದರು. ಸೋಮವಾರಪೇಟೆ ಸಾಂಬಾರ ಮಂಡಳಿ ಕ್ಷೇತ್ರಾಧಿಕಾರಿ ಎನ್.ಬಿ. ಲೋಕೇಶ್ ಕಾಳುಮೆಣಸು ಬೆಳೆಯ ಗುಣಮಟ್ಟ ಇದರ ಸುಧಾರಣೆ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಗಾರದ ಬಗ್ಗೆ ಬೆಳೆಗಾರರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕಲೇಶಪುರ ಸಾಂಬಾರ ಮಂಡಳಿಯ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಎಂ.ವೈ.ಹೊನ್ನೂರು ಮಾತನಾಡಿದರು. ಕೊಡ್ಲಿಪೇಟೆ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಹನೀಫ್, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಕೊಡ್ಲಿಪೇಟೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ. ಭಗವಾನ್, ಹೇಮಾವತಿ ರೋಟರಿ ಲೆಪ್ಟಿನೆಂಟ್ ಎಚ್.ಎಂ. ದಿವಾಕರ್ಸ, ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು.