ಪೆರಾಜೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಜೀರ್ಣೋದ್ಧಾರ: ವಿಜ್ಞಾಪನಾ ಪತ್ರ ಬಿಡುಗಡೆ

KannadaprabhaNewsNetwork |  
Published : Jan 14, 2025, 01:01 AM IST
32 | Kannada Prabha

ಸಾರಾಂಶ

ಪೆರಾಜೆ, ಮಾಣಿ ಮತ್ತು ಅರೆಬೆಟ್ಟು ಮೂರು ಗ್ರಾಮಗಳಿಗೆ ಸೇರಿದ ಪೆರಾಜೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನರ್ ನವೀಕರಣ ಕಾರ್ಯಗಳು ನಿರ್ವಿಘ್ನವಾಗಿ ನಿರೀಕ್ಷಿತ ಸಮಯದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಲಿ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ, ಆರ್‌ಎಸ್‌ಎಸ್‌ ಪ್ರಮುಖ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಹೇಳಿದರು.ಅವರು ಪೆರಾಜೆ, ಮಾಣಿ ಮತ್ತು ಅರೆಬೆಟ್ಟು ಮೂರು ಗ್ರಾಮಗಳಿಗೆ ಸೇರಿದ ಪೆರಾಜೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು.ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಗ್ರಾಮದ ಜನರು ಸಂಘಟಿತವಾಗಿ ಮಾಡಿದಾಗ ಅತ್ಯಂತ ಸುಲಭವಾಗಿ ನಿರೀಕ್ಷಿತ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.ಭಾರತ ವೈಶಿಷ್ಟ್ಯ ಪೂರ್ಣವಾಗಿದ್ದು, ಇಲ್ಲಿ ಸಾವಿರ ಸಾವಿರ ವರ್ಷಗಳಿಂದ ದೇವರ ಆಧಾರದಲ್ಲಿ ಜೀವಿಸುತ್ತಿದ್ದಾರೆ. ಎಲ್ಲ ಹೊತ್ತಿನಲ್ಲಿ ಎಲ್ಲ ಕಡೆಯಲ್ಲಿ ದೇವರಿದ್ದಾನೆ ಎಂದು ಪೂಜೆ ಮಾಡುವ ಜನ ನಾವಾಗಿದ್ದೇವೆ. ಸಣ್ಣಪುಟ್ಟ ವಿಚಾರಗಳನ್ನು ಮರೆತು ಎಲ್ಲರಿಗೊಸ್ಕರ ಪೂಜೆ ಮಾಡಲು ದೇವಸ್ಥಾನಗಳಿವೆ ಎಂದು ಹೇಳಿದರು.

ಧರ್ಮ, ಸಂಸ್ಕೃತಿಗಳು ಉಳಿಯಬೇಕಾದರೆ ದೇವಸ್ಥಾನಗಳು ಬೆಳಗಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡಿದರೆ, ದೇವರು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂದು ಅವರು ತಿಳಿಸಿದರು.ಹಿಂದು ಸಮಾಜ ಅಪಾಯದಲ್ಲಿದ್ದು, ದೇವಸ್ಥಾನದ ಬ್ರಹ್ಮಕಲಶದ ಹೆಸರಿನಲ್ಲಿ ಹಿಂದೂಗಳು ಒಂದಾಗುವ ಕೆಲಸ ಆಗಬೇಕಾಗಿದೆ. ದೇವಸ್ಥಾನಗಳು ನಿರ್ಮಾಣವಾಗುತ್ತಿರುವುದು ಜಗತ್ತಿನ ಹಿತಕ್ಕೋಸ್ಕರ ಎಂದರು.ಹಿರಿಯರಾದ ಶಂಕರನಾರಾಯಣ ಘನಪಾಠಿ ಮಾತನಾಡಿ, ಮಕ್ಕಳಿಗೆ ಧರ್ಮ, ಸಂಸ್ಕಾರವನ್ನು ತಿಳಿಸುವ ಕಾರ್ಯ ನಮ್ಮಿಂದಾಗಬೇಕಾಗಿದೆ. ಸ್ವಾರ್ಥ ರಹಿತವಾಗಿ ದೇಶದ ಅಭಿವೃದ್ಧಿಯ ಕೆಲಸದಲ್ಲಿ ಮುಂದಿನ ಜನಾಂಗ ಜೊತೆಯಾಗಲಿ ಎಂದು ಶುಭಹಾರೈಸಿದರು.

ಸುಮಾರು 2.3 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳ್ಳುವ ಈ ದೇವಾಲಯದ ನೀಲಿನಕಾಶೆ ತಯಾರಿಸಿದ ಜಗನ್ನಿವಾಸ ರಾವ್, ದೇವಾಲಯದ ವಿನ್ಯಾಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಜೀರ್ಣೋದ್ಧಾರ ಅಂಗವಾಗಿ ದೇಣಿಗೆ ನೀಡಿದ ದಾನಿಗಳಿಗೆ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ರಶೀದಿ ನೀಡಿ ಗೌರವಿಸಿದರು.ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳಾ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸಚಿನ್ ರೈ ಮಾಣಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಣಿ, ಗೌರವ ಸಲಹೆಗಾರ ಬಿ.ಟಿ‌.ನಾರಾಯಣ ಭಟ್, ಜಗನ್ನಾಥ ಚೌಟ ಬದಿಗುಡ್ಡೆ, ಗೌರವ ಕೋಶಾಧಿಕಾರಿ ಡಾ.ಶ್ರೀನಾಥ್ ಆಳ್ವ ಪೆರಾಜೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಗೋಪಾಲ ಮೂಲ್ಯ ನೆಲ್ಲಿ, ಸಂದೀಪ್ ಶೆಟ್ಟಿ ಅರೆಬೆಟ್ಟು, ಕುಶಲ ಎಂ. ಪೆರಾಜೆ, ಹರೀಶ್ ರೈ ಪಾಣೂರು, ದೀಪಕ್ ಪೆರಾಜೆ, ಲಕ್ಮೀಶ ನಾಯ್ಕ, ಶ್ರೀನಿವಾಸ ಪೆರಾಜೆ, ರಾಘವ ಗೌಡ, ನಾರಾಯಣ ಎಂ‌.ಪಿ‌., ಮಾಧವ ಕುಲಾಲ್, ನಾರಾಯಣ ಶೆಟ್ಟಿ ತೋಟ, ರವೀಂದ್ರ ರೈ ಮಂಜೊಟ್ಟಿ ಉಮೇಶ್ ಎಸ್.ಪಿ., ದಿವಾಕರ ಗೌಡ ಶಾಂತಿಲ ಉಪಸ್ಥಿತರಿದ್ದರು.ಕಾರ್ಯದರ್ಶಿ ರಾಜಾರಾಮ್ ಕಾಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.

ಉಪನ್ಯಾಸಕ ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!