ಪ್ರಾಣಾಪಾಯದ ಪ್ರಮಾಣ ಶೇ. 70ರಷ್ಟು ಕಡಿಮೆ ಆಗಿದ್ದರೆ ಪ್ರಾಣಿಗಳ ಸಾವು ಶೇ. 40ರಷ್ಟು ಕ್ಷೀಣೀಸಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ವಿದ್ಯುತ್ ಅಪಘಾತಗಳ ಪ್ರಮಾಣ ಶೇ. 70 ರಷ್ಟು ಕುಸಿದಿದೆ ಎಂದು ನಿಯಮಿತದ ಮುಖ್ಯ ಎಂಜಿನಿಯರ್ ಮಹದೇವಸ್ವಾಮಿ ಪ್ರಸನ್ನ ಹೇಳಿದರು.
ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಕಡಕೊಳದಲ್ಲಿರುವ ಕೆಇಬಿಇಎ ತರಬೇತಿ ಕ್ರೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, 2022-2023ನೇ ಸಾಲಿನಲ್ಲಿ 211 ವಿದ್ಯುತ್ಅಪಘಾತಗಳು ಸಂಭವಿಸಿತ್ತು. 2023-24ರಲ್ಲಿ 138 ವಿದ್ಯುತ್ಅಪಘಾತಗಳು ಮಾತ್ರ ಸಂಭವಿಸಿದ್ದು, ಒಟ್ಟಾರೆ ಅಪಘಾತಗಳ ಪ್ರಮಾಣದಲ್ಲಿ ಶೇ. 35ರಷ್ಟು ಕಡಿಮೆಯಾಗಿದೆ. ಪ್ರಾಣಾಪಾಯದ ಪ್ರಮಾಣ ಶೇ. 70ರಷ್ಟು ಕಡಿಮೆ ಆಗಿದ್ದರೆ ಪ್ರಾಣಿಗಳ ಸಾವು ಶೇ. 40ರಷ್ಟು ಕ್ಷೀಣೀಸಿದೆ ಎಂದರು.
ವಿದ್ಯುತ್ ಸುರಕ್ಷತೆ ವಿಚಾರದಲ್ಲಿ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂಬುದನ್ನು ನೆನಪಿಸಲು ಸುರಕ್ಷತಾ ಸಪ್ತಾಹ ಅತ್ಯಂತ ಮುಖ್ಯವಾಗಿದೆ. ಗ್ರಾಹಕರಿಗೆ ಗುಣಮಟ್ಟದ ನಿರಂತರ ವಿದ್ಯುತ್ಪೂರೈಸುವ ಜತೆಗೆ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಬೇಕು. ಕಾರ್ಯ ನಿರ್ವಹಣೆ ವೇಳೆ ಸುರಕ್ಷತಾ ನಿಯಮ ಉಲ್ಲಂಘಿಸಿದ ಸಿಬ್ಬಂದಿಗೆ ದಂಡ ವಿಧಿಸುವ ಸಂಬಂಧ ಇತ್ತೀಚಿನ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸಿಬ್ಬಂದಿಯ ಸುರಕ್ಷತೆಯ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸೆಸ್ಕ್ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಮಾತನಾಡಿ, ರಾಷ್ಟ್ರೀಯ ವಿದ್ಯುತ್ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ನಮ್ಮ ಸಿಬ್ಬಂದಿಗೆ ಸುರಕ್ಷತೆಯ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಗಿದೆ. ಇದೇ ರೀತಿ ನಮ್ಮ ಎಲ್ಲ ಉಪವಿಭಾಗಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಬೆಳಕು ನೀಡಲು ಶ್ರಮಿಸುವ ನಮ್ಮ ಸಿಬ್ಬಂದಿ ನಮಗೆ ಅಮೂಲ್ಯ. ವಿದ್ಯುತ್ಅಪಘಾತಗಳು ಸಂಭವಿಸದಂತೆ ಎಲ್ಲ ಸುರಕ್ಷತಾ ಕ್ರಮ ಪಾಲಿಸಲಾಗುತ್ತದೆ. ನಮ್ಮ ಸೆಸ್ಕ್ವ್ಯಾಪ್ತಿಯಲ್ಲಿ ವಿದ್ಯುತ್ಅವಘಡಗಳ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನಕರ ಅಂಶ ಎಂದರು.
ವಿದ್ಯುತ್ ಅವಘಡಗಳಿಗೆ ಪ್ರಮುಖ ಕಾರಣಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತಂತೆ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಜತೆಗೆ ನಾಟಕ ಪ್ರದರ್ಶಿಸಲಾಯಿತು.
ಸೆಸ್ಕ್ ಹೆಚ್ಚುವರಿ ಮುಖ್ಯ ಪರಿವೀಕ್ಷಕರಾದ ಎಚ್.ಎಸ್.ವೆಂಕಟೇಶ್, ಅಧೀಕ್ಷಕ ಎಂಜಿನಿಯರ್ ಸುನಿಲ್, ಉಪ ಮುಖ್ಯ ಪರಿವೀಕ್ಷಕರಾದ ಅಲ್ತಾಫ್ಹುಸೇನ್, ಸಂದೀಪ್, ರಘುಕುಮಾರ್ ಸೇರಿದಂತೆ ವಿದ್ಯುತ್ ಪರಿವೀಕ್ಷಕ ವಲಯದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.