ಕನ್ನಡಪ್ರಭ ವಾರ್ತೆ ಮೈಸೂರು
ಶಾಲೆಯಲ್ಲಿ ಕಲಿತ ವಿದ್ಯೆಯು ಜ್ಞಾನ ಮತ್ತು ಕ್ರಿಯಾ ರೂಪ ಪಡೆದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ತಿಳಿಸಿದರು.ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಸ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ಶಿವಪ್ರಸಾದ್ ಮೇಲುದುರ್ಗಮಠ ಅವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ 111ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಮತ್ತು 29ನೇ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿ ದಿಸೆಯಲ್ಲಿಯೇ ಚಂಚಲತೆಯಿಂದ ಕೂಡಿರುವ ಮನಸ್ಸನ್ನು ಏಕಾಗ್ರತೆಗೊಳಿಸಲು, ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ ಎಂಬ ಬಸವಣ್ಣ ಅವರ ವಚನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳು ಕೇವಲ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಬದುಕಿನದ್ದುಕ್ಕೂ ಸುಸಂಸ್ಕೃತ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತವೆ ಎಂದು ಅವರು ಹೇಳಿದರು.ಬಸವಣ್ಣನವರು ಬೇರೆ ರಾಜ್ಯ ಮತ್ತು ದೇಶಗಳಿಂದ ಬಂದ ಅನ್ಯಭಾಷೀಯ ಶರಣರಿಗೆ ಕನ್ನಡಾಭಿಮಾನ ಬೆಳೆಸಿ, ಕನ್ನಡವನ್ನು ಕಲಿಸಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಲು ಪ್ರೇರಣೆ ನೀಡಿದುದರ ಫಲವಾಗಿ ಹಾಗೂ ಅವರ ವೈಚಾರಿಕ ಚಿಂತನೆ ಮತ್ತು ಸಮಾಜ ಸುಧಾರಣೆಯ ವಿವಿಧ ಅಂಶಗಳನ್ನು ಗಮನಿಸಿ ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು. ನಿವೃತ್ತ ಪ್ರಾಂಶುಪಾಲೆ ಮಂಜುಳಾ ಶಿವಪ್ರಸಾದ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ನೈಜ ಪ್ರತಿಭೆ ಅಡಕವಾಗಿದ್ದು, ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ದೇಶದ ಶಕ್ತಿಯಾಗುತ್ತಾರೆ. ವಚನ ಸಾಹಿತ್ಯ ನಡೆ ನುಡಿಯಲ್ಲಿ ಸಾಮ್ಯತೆ ಕಲಿಸಿ ಉತ್ತಮ ಬದುಕನ್ನು ರೂಪಿಸುತ್ತದೆ ಎಂದು ಹೇಳಿದರು.ನಂತರ ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲೇಖನ ಸಾಮಗ್ರಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್. ಭಾಗ್ಯರಾಜು, ಸಿ. ಧನಲಕ್ಷ್ಮಿ, ಜಯಶ್ರೀ, ಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್. ಶಾರದಾ, ಶಿಕ್ಷಕರಾದ ವಿ.ಎಂ. ಸುಧಾ, ಜಸೀಲಾ, ಅತಿಥಿ ಶಿಕ್ಷಕರಾದ ಮನುಜ, ಮಹದೇವಸ್ವಾಮಿ ಇದ್ದರು.