ಕೊಪ್ಪಳ: ಬಾಲ್ಯ ವಿವಾಹ ತಡೆಗೆ ರಚಿಸಲಾದ ತಾಲೂಕು ಮಟ್ಟದ ಸಮಿತಿಯ ಎಲ್ಲ ಸದಸ್ಯರು, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ವಿಠ್ಠಲ್ ಚೌಗಲಾ ಹೇಳಿದರು.
ಬುಧವಾರ ಬಾಲ್ಯ ವಿವಾಹ ತಡೆಯುವ ತಾಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಿತಿ ಸಭೆಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಪ್ರತಿನಿಧಿಗಳನ್ನು ಸಭೆಗೆ ನಿಯೋಜಿಸದೆ ಖುದ್ದಾಗಿ ಅಧಿಕಾರಿಗಳೇ ಹಾಜರಿರಬೇಕು. ಇದರಿಂದ ಬಾಲ್ಯ ವಿವಾಹ ಪ್ರಕರಣ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಪರಸ್ಪರ ಸಮನ್ವಯ ಸಾಧನೆ ಮುಂತಾದವುಗಳ ಕುರಿತು ಎಲ್ಲರಿಗೂ ಸೂಕ್ತ ಮಾಹಿತಿ ದೊರೆಯುತ್ತದೆ.ಅಧಿಕಾರಿ, ಸಮಿತಿ ಸದಸ್ಯರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್. ಮಾತನಾಡಿ, 2023-24 ರಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ದೂರುಗಳು ಮತ್ತು ತಡೆ ಹಿಡಿದ ಮಾಹಿತಿ ತಿಳಿಸಿದರು.ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ನಡೆಸಲು ತಿಳಿಸಿದಂತೆ ಜನವರಿ-202ರಲ್ಲಿ ಎಲ್ಲ ಪಂಚಾಯತಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯನ್ನು ಸಂಬಂಧಿಸಿದ ನೋಡಲ್ ಅಧಿಕಾರಿಗಳು ನಡೆಸಿ ಜಿಪಿಎಸ್ ಫೋಟೋ ಮತ್ತು ವರದಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಲು ಸೂಚಿಸಿದರು. ಬಾಲ್ಯವಿವಾಹ ತಡೆದ ಅನುಸರಣಾ ಭೇಟಿಯ ವರದಿ ನಿಗದಿಪಡಿಸಿರುವ ಎಲ್ಲ ಇಲಾಖೆಯವರು ಭೇಟಿ ಮಾಡಿ ವರದಿ ತಪ್ಪದೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದರು.
ಸೀಡ್ಸ್, ಹೋಟೆಲ್, ಇಟ್ಟಂಗಿ ಬಟ್ಟಿ, ಉಸುಕು ವ್ಯಾಪಾರ, ಕೋಳಿಫಾರಂ ಮುಂತಾದೆಡೆ ಬಾಲಕಾರ್ಮಿಕರು ದುಡಿಯುತ್ತಿದ್ದು, ಕೈಗಾರಿಕೆಗಳಲ್ಲಿ ನಿಯೋಜಿತ ಅಧಿಕಾರಿಗಳು ಭೇಟಿ ನೀಡಿ ವರದಿ ಕೊಡಬೇಕು. ಬಾಲಕಾರ್ಮಿಕರು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಮುಂಬರುವ ಜನವರಿ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸುವ ಸಭೆಗೆ ಪ್ರೌಢಶಾಲಾ ಮಕ್ಕಳನ್ನು ಹಾಜರಿರುವಂತೆ ನೋಡಿಕೊಳ್ಳಬೇಕು. ಬಾಲ್ಯವಿವಾಹ ಹೆಚ್ಚಾಗಿ ಕಂಡುಬರುವ ಸೂಕ್ಮ ಪ್ರದೇಶಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು. ಸಾಮೂಹಿಕ ವಿವಾಹಗಳ ಆಯೋಜಕರು ಕಡ್ಡಾಯವಾಗಿ ಅಧ್ಯಕ್ಷರು/ತಹಸೀಲ್ದಾರರ ಅನುಮತಿ ಪಡೆಯತಕ್ಕದ್ದು ಹಾಗೂ ವಧು-ವರರ ವಯಸ್ಸಿನ ದಾಖಲೆ ನಿಗದಿತ ಸಮಯದಲ್ಲಿ ನೀಡತಕ್ಕದ್ದು. ಸಾಮೂಹಿಕ ವಿವಾಹಗಳ ಆಯೋಜಕರು ಸಂಸ್ಥೆ/ ಕಮಿಟಿಯನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿಗಳು, ಮೇಲ್ವಿಚಾರಕಿಯರು, ಮಕ್ಕಳ ಸಹಾಯವಾಣಿ-1098 ಕೊಪ್ಪಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.