ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಖಾತ್ರಿ ಪಡಿಸಿ ಎಂಬ ಘೋಷ ವಾಕ್ಯಗಳೊಂದಿಗೆ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ ಸಂಘಟಿಸಲಾಗುತ್ತಿದೆ. ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ರಾಜ್ಯದ 31 ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್), ನೊಂದ ಮಹಿಳೆಯರ ಧ್ವನಿಯಾಗಿ ದೇಶದಾದ್ಯಂತ ಹೊರಾಟಗಳನ್ನು ಸಂಘಟಿಸುತ್ತಾ ಬಂದಿದೆ. ಹೋರಾಟದ ಮುಂದುವರಿದ ಭಾಗವಾಗಿ ಸಮ್ಮೇಳನ ನಡೆಸಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಖಚಿತಪಡಿಸಿ ಎಂಬ ಹಕ್ಕೊತ್ತಾಯಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಗುತ್ತಿದೆ ಎಂದರು.ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹಸುಳೆ, ವೃದ್ಧೆಯೆನ್ನದೆ ಅತ್ಯಾಚಾರ, ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಮರ್ಯಾದೆಗೇಡು ಹತ್ಯೆ, ಗುಂಪು ಅತ್ಯಾಚಾರ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯ, ಶಿಶು ಹತ್ಯೆಯಂತಹ ಘಟನೆಗಳು ನಿರಂತರವಾಗಿವೆ. ಇಂತಹ ಅಮಾನವೀಯ ದಾಳಿಗಳು ನಡೆಯಲು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಧಃಪತನ, ಪುರುಷ ಪ್ರಧಾನ ಮನೋಭಾವ, ಪ್ರಜಾತಾಂತ್ರಿಕ ಮೌಲ್ಯಗಳ ಅಭಾವ, ಹಳೆಯ ಪ್ರತಿಗಾಮಿ ಊಳಿಗಮಾನ್ಯ ಮೌಲ್ಯಗಳ ಪ್ರಭಾವ ಪ್ರಮಖ ಕಾರಣವಾಗಿವೆ ಎಂದರು.
ಮಹಿಳಾ ವಿಮುಕ್ತಿಯ ಅಂತಿಮ ಗುರಿಗಳಾದ ಸ್ವಾತಂತ್ರ್ಯ, ಸಮಾನತೆ ಗಳಿಸಲು ಸಮಾಜದ ಮೂಲಭೂತ ಬದಲಾವಣೆ ಪೂರೈಸಿ ನವ ಸಮಾಜದ ನಿರ್ಮಾಣ ಮಾಡಬೇಕಾಗಿದೆ. ಇಂತಹ ಉದಾತ್ತ ಕಾರ್ಯದಲ್ಲಿ ಎಲ್ಲಾ ಸ್ತರದ ಮಹಿಳೆಯರನ್ನು ಸಂಘಟಿಸುತ್ತಿರುವ ಎಐಎಂಎಸ್‌ಎಸ್ ತನ್ನ 7ನೇ ರಾಜ್ಯ ಸಮ್ಮೇಳನಕ್ಕೆ ಮುನ್ನುಗ್ಗುತ್ತಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ಅನುರಾಧ ಪಿ.ಎಂ. ಅಧ್ಯಕ್ಷತೆಯಲ್ಲಿ ಇನ್ನೂ ಅನೇಕ ಗಣ್ಯರ ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ಶಾಂತಾ ಹೇಳಿದರು.
ರಾಜ್ಯಮಟ್ಟದ ಮಹಿಳಾ ಸಮ್ಮೇಳನಕ್ಕೆ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿ ಲೋಕದ ಡಾ.ಬರಗೂರು ರಾಮಚಂದ್ರಪ್ಪ, ಪಂಡಿತ್ ರಾಜೀವ್ ತಾರಾನಾಥ್, ಅಲ್ಲಮಪ್ರಭು ಬೆಟ್ಟದೂರ, ಎಸ್ಆರ್ ಹಿರೇಮಠ, ಎಸ್.ಜಿ.ಸಿದ್ದರಾಮಯ್ಯ, ಬಿ.ಎಲ್.ವೇಣು, ಪುರುಷೋತ್ತಮ ಬಿಳಿಮಲೆ, ಹೆಚ್.ಎಲ್.ಪುಷ್ಪಾ ಸೇರಿದಂತೆ ನೂರಾರು ಸಾಹಿತಿಗಳು ಶುಭ ಕೋರಿದ್ದಾರೆ. ಸಂಘಟನೆಯ ಅಖಿಲ ಭಾರತ ಅಧ್ಯಕ್ಷೆ ಕೆಯಾ ಡೆ, ಪಾಲಿಟ್ ಬ್ಯೂರೋ ಸದಸ್ಯ ಕೆ.ರಾಧಾಕೃಷ್ಣ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಎಐಎಂಎಸ್ ಎಸ್ ಜಿ್ಲ್ಲಾ ಸಂಚಾಲಕಿ ಸುಜಾತ, ಸಹ ಸಂಚಾಲಕಿ ಕುಮುದ, ಗಿರಿಜಮ್ಮ, ಎಐಡಿಎಸ್ ಓ ಜಿಲ್ಲಾ ಸಂಚಾಲಕ ರವಿಕುಮಾರ್ ಈ ವೇಳೆ ಉಪಸ್ಥಿತರಿದ್ದರು