ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಮತ್ತು ಇ-ಸಿಗರೇಟ್‌ ಮಾರಾಟ ಸಂಬಂಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ 23 ಮಂದಿಯನ್ನು ಬಂಧಿಸಿ 8 ಕೋಟಿ ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್‌, ಆರೋಪಿಗಳಿಂದ 5.36 ಕೆ.ಜಿ ಹೈಡ್ರೋಗಾಂಜಾ, 143 ಗ್ರಾಂ ಕೋಕೇನ್‌, 10 ಕೆ.ಜಿ. ಗಾಂಜಾ, 237 ಎಂಡಿಎಂಎ, 107 ಗ್ರಾಂ ಮೆಥಪೆಂಟಮೈನ್‌, 180 ಬಾಕ್ಸ್‌ ಸಿ-ಸಿಗರೆಟ್‌ ಆಯಿಲ್‌ ಮತ್ತು ಇ-ಸಿಗರೆಟ್‌, 452 ಬಾಕ್ಸ್‌ ವಿದೇಶಿ ಸಿಗರೆಟ್‌ಗಳು, 1206 ಹುಕ್ಕಾ ಸಿಗರೇಟ್‌, 1197 ಇ-ಸಿಗರೆಟ್‌, 490 ವಿದೇಶಿ ಸಿಗರೆಟ್‌, 120 ಹುಕ್ಕಾ ಸೆಟ್‌, 100 ಇ-ಸಿಗರೆಟ್‌ ರೀಫಿಲ್‌ ಮತ್ತು 6 ಹುಕ್ಕಾ ಸೆಟ್‌ ಸೇರಿದಂತೆ ಒಟ್ಟು 8 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಸಿಸಿಬಿ, ಹೆಬ್ಬಾಳ, ಇಂದಿರಾನಗರ, ಜೀವನ್ ಭೀಮಾನಗರ, ಸುದ್ದಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.