ಜನರಿಂದ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ

KannadaprabhaNewsNetwork |  
Published : Jun 15, 2024, 01:02 AM IST
ಹೊನ್ನಾಳಿ  ಫೋಟೋ 14ಎಚ್.ಎಲ್.ಐ2. ಪಟ್ಟಣದ ತಾ,ಪಂ.ನ ಸಾಮಥ್ರ್ಯಸೌಧದಲ್ಲಿ ಶುಕ್ರವಾರ  ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು | Kannada Prabha

ಸಾರಾಂಶ

ಲೋಕಸಭೆ ಹಾಗೂ ವಿಧಾನ ಪರಿಷತ್ತು ಚುನಾವಣೆ, ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ಬಾಕಿ ಉಳಿದಿವೆ. ಈಗ ಚುನಾವಣೆಗಳು ಮುಗಿದಿದ್ದು, ಕಚೇರಿಗಳಲ್ಲಿ ಜನರ ಕೆಲಸಗಳು ಬಾಕಿ ಇಲ್ಲದಂತೆ ನೋಡಿಕೊಳ್ಳಿ. ಯಾವುದೇ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

- ತ್ರೈಮಾಸಿಕ ಸಭೆಯಲ್ಲಿ ಹೊನ್ನಾಳಿ ಶಾಸಕ ಶಾಂತನಗೌಡ ಸೂಚನೆ । ನಕಲಿ ಗೊಬ್ಬರ ಮಾರಾಟ ವಿರುದ್ಧ ಎಚ್ಚರಕ್ಕೆ ಸೂಚನೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಲೋಕಸಭೆ ಹಾಗೂ ವಿಧಾನ ಪರಿಷತ್ತು ಚುನಾವಣೆ, ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ಬಾಕಿ ಉಳಿದಿವೆ. ಈಗ ಚುನಾವಣೆಗಳು ಮುಗಿದಿದ್ದು, ಕಚೇರಿಗಳಲ್ಲಿ ಜನರ ಕೆಲಸಗಳು ಬಾಕಿ ಇಲ್ಲದಂತೆ ನೋಡಿಕೊಳ್ಳಿ. ಯಾವುದೇ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ ನೀಡಿದರು.

ಶುಕ್ರವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಚುನಾವಣೆ ನಂತರ ಮೊದಲ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಮಳೆ ಶುಭಾರಂಭವಾಗಿದೆ. ಈಗಾಗಲೇ ರೈತರು ಭೂಮಿ ಹದ ಮಾಡಿ, ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಅವಳಿ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಬೀಜ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಬೇರೆ ಜಿಲ್ಲೆಗಳಲ್ಲಿ ನಕಲಿ ರಸಗೊಬ್ಬರ ಮಾರುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಇಂತಹ ಕಳಪೆ ಗೊಬ್ಬರ ಮಾರಾಟ ಬಗ್ಗೆ ಮಾಹಿತಿ ಬಂದರೆ ಕೂಡಲೇ ಅಂಗಡಿಗಳ ಮೇಲೆ ದಾಳಿ ನಡೆಸಬೇಕು. ನಕಲಿ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ತನಿಖೆ ಮಾಡಿಸಿ, ಕ್ರಮ ಜರುಗಿಸಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ಅವರಿಗೆ ಸೂಚಿಸಿದರು.

ಅಧಿಕಾರಿ ಪ್ರತಿಮಾ ಮಾತನಾಡಿ, ತಾಲೂಕಿನಲ್ಲಿ ವಾರ್ಷಿಕ ವಾಡಿಕೆ ಮಳೆ 703 ಮಿ.ಮೀ. ಇದ್ದು, ತಾಲೂಕಿನಲ್ಲಿ ಜೂನ್ ಮಾಹೆವರೆಗೆ 146 ಮಿ.ಮೀ. ವಾಡಿಕೆ ಮಳೆಯಲ್ಲಿ ವಾಸ್ತವಿಕವಾಗಿ ಒಟ್ಟು 192 ಮಿಮೀ ಮಳೆ ಅಗಿದೆ. ಶೇ.31ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹೇಳಿದರು.

ಮೆಕ್ಕೆಜೋಳ, ಭತ್ತ, ರಾಗಿ ತೊಗರಿ, ಅಲಸಂದೆ, ಶೇಂಗಾ, ಹತ್ತಿ ಹಾಗೂ ಇತರೆ ಬೆಳೆಗಳು ಸೇರಿ ಒಟ್ಟು ಅವಳಿ ತಾಲೂಕಿನಲ್ಲಿ 58985 ಹೆಕ್ಟರ್ ಪ್ರದೇಶದಲ್ಲಿ 12,575 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಬಿತ್ತನೆ ಬೀಜಗಳ ಖರೀದಿಯಲ್ಲಿ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಅವಳಿ ತಾಲೂಕುಗಳಲ್ಲಿ ಕಳಪೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದುವೇಳೆ ಅಂತಹ ಬೆಳವಣಿಗೆ ನಡೆದರೆ ಕೂಡಲೇ ದಾಳಿ ನಡೆಸಿ, ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

2024- 2025ನೇ ಸಾಲಿನಲ್ಲಿ ರಸಗೊಬ್ಬರ ಬೇಡಿಕೆ (ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ) 46363 ಮೆಟ್ರಿಕ್ ಟನ್‌ಗಳಿವೆ. ಈಗಾಗಲೇ 29230 ಮೆಟ್ರಿಕ್ ಟನ್‌ನಷ್ಟು ಗೊಬ್ಬರ ವಿತರಣೆಯಾಗಿದೆ. ಹಾಲಿ 21218 ಮೆಟ್ರಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಫುಡ್ ಕಿಟ್‍ನಲ್ಲಿ ಅಕ್ರಮ:

ಕೊರೋನಾ ಹಾವಳಿ ಸಂದರ್ಭ ಸುಮಾರು 12.500 ಫುಡ್ ಕಿಟ್‍ಗಳನ್ನು ಎಲ್ಲೋ ಇಳಿಸಿ, ಯಾರಿಗೋ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಇನ್ನು ಮುಂದೆ ಹೀಗಾದರೆ ಸುಮ್ಮನಿರುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಏನೇ ಸೌಲಭ್ಯ ಬಂದರೂ ಗಮನಕ್ಕೆ ತರಬೇಕು. ಅರ್ಹರಿಗೆ ಮಾತ್ರವೇ ವಿತರಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ತ್ರೈಮಾಸಿಕ ಸಭೆಗೆ ಹಾಜರಾಗದ ಕಾರ್ಮಿಕ ಇಲಾಖೆ ಅಧಿಕಾರಿ ಮಮ್ತಾಜ್ ಬೇಗಂ ಅವರಿಗೆ ನೋಟಿಸ್ ನೀಡಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿಲು ಸೂಚಿಸಿದರು. ಈ ಕುರಿತು ಸಭೆ ನಡಾವಳಿಯಲ್ಲಿ ಖುದ್ದಾಗಿ ಶಾಸಕರೇ ಹೇಳಿ ಬರೆಯಿಸಿದರು.

ತಾಲೂಕಿನ ಸರ್ಕಾರಿ ಶಾಲೆ ಆವರಣ ಹಾಗೂ ಕೊಠಡಿಗಳಿಗೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಅವಳಿ ತಾಲೂಕುಗಳಲ್ಲಿ ನಡೆಯುತ್ತಿರುವ ಶಾಲಾ ಕೊಠಡಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕೊಠಡಿಗಳ ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

ಅವಳಿ ತಾಲೂಕಿನ 13 ಅಡುಗೆ ಕೊಠಡಿಗಳು ದುರಸ್ತಿಯಾಗಬೇಕಿದೆ ಎಂದು ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್.ರುದ್ರಪ್ಪ ಮಾಹಿತಿ ನೀಡಿದರು. ಆಗ ಶಾಸಕರ ನಿಧಿಯಲ್ಲಿ ದುರಸ್ತಿ ಕಾಮಗಾರಿ ಮಾಡಿಸುತ್ತೇನೆ, ಕ್ರಿಯಾಯೋಜನೆ ತಯಾರಿಸಿ ಎಂದು ಸೂಚಿಸಿದರು.

ಅವಳಿ ತಾಲೂಕಿನಾದ್ಯಂತ ಅಂಗನವಾಡಿಗಳಲ್ಲಿ ನಿವೃತ್ತಿಹೊಂದಿದ ಅಥವಾ ನಿಧನ ಹೊಂದಿದ್ದರಿಂದ ಅನೇಕ ಹುದ್ದೆಗಳು ಖಾಲಿಯಾಗಿವೆ. ಕೂಡಲೇ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಿ ಎಂದರು. ಆಗ ಸಿಡಿಪಿಒ ಜ್ಯೋತಿ ಉತ್ತರಿಸಿ, ಸಾಫ್ಟವೇರ್‌ಗಳು ಇನ್‍ಸ್ಟಾಲ್ ಆದ ನಂತರ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲಾಗುವುದು. ಇದೆಲ್ಲಾ ಆನ್‍ಲೈನ್‍ನಲ್ಲೇ ಆಗುತ್ತದೆ ಎಂದರು.

ಬಿಸಿಎಂ ಮತ್ತು ಸಮಾಜಕ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳು ನಿರ್ಮಾಣಗೊಂಡು 2 ವರ್ಷ ತುಂಬುವುದರೊಳಗೆ ಸೋರುತ್ತಿರುವ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಶಾಸಕರು, ಸೂಕ್ತ ಕ್ರಮ ವಹಿಸಲು ತಾಪಂ ಇಒ ರಾಘವೇಂದ್ರ ಅವರಿಗೆ ಸೂಚಿಸಿದರು.

ಅರಣ್ಯ, ತುಂಗಾ ಮೇಲ್ಗಂಡೆ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕೆಲಸಗಳು ಹಾಗೂ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ, ತುಂಗಾ ಮೇಲ್ದಂಡೆ ಎಇಇ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಮಾ, ಬಿಸಿಎಂ ಇಲಾಖೆ ಮೃತ್ಯುಂಜಯ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಇಸಿಒ ಮುದ್ದನಗೌಡ, ತಾಪಂ ವ್ಯವಸ್ಥಾಪಕ ಮಹ್ಮದ್‍ ರಫಿ, ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - - -14ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ತ್ರೈಮಾಸಿಕ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ