ಚುನಾವಣಾ ತರಬೇತಿ ಕಾರ್ಯಕ್ರಮ
ಕರ್ನಾಟಕ ಪಶ್ಚಿಮ ಪದವೀಧರ ದೈವಾರ್ಷಿಕ ಚುನಾವಣಾ-2026ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತ, ಪಾರದರ್ಶಕವಾಗಿ ಮತ್ತು ಯಾವುದೇ ಲೋಪದೋಷಗಳಿಲ್ಲದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜರುಗಿದ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಚುನಾವಣಾ ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ತರಬೇತಿ ಕಾರ್ಯಕ್ರಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚುನಾವಣಾ ಕಾರ್ಯದಲ್ಲಿ ಅಧಿಕಾರಿಗಳು ನಿಖರತೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಕ್ರಿಯೆಯಲ್ಲಿ ಆಚಾತುರ್ಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳು ತಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಹೇಳಿಕೊಡುವ ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು. ಮತದಾನದ ಅಂಕಿ-ಅಂಶಗಳು ಹಾಗೂ ವರದಿಗಳನ್ನು ಸಿದ್ಧಪಡಿಸುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಿಖರವಾದ ಲೆಕ್ಕಾಚಾರವಿರಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಮಯಪಾಲನೆ ಅತ್ಯಂತ ಮುಖ್ಯವಾದುದು. ಮಾಹಿತಿಯನ್ನು ಕಾಲಕಾಲಕ್ಕೆ ನೀಡಬೇಕು ಅಧಿಕಾರಿಗಳಿಗೆ ಎಚ್ಚರಿಸಿದರು.
ತರಬೇತಿಯ ಹಂತಗಳು: ಮೊದಲ ಹಂತದ ತರಬೇತಿ ಇದು ಪ್ರಾಥಮಿಕ ತರಬೇತಿಯಾಗಿದ್ದು, ಕೇವಲ ಪ್ರಿಸೈಡಿಂಗ್ ಆಫೀಸರ್ (Polling Officer / Presiding Officer) ಮಟ್ಟದ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಎರಡನೇ ಹಂತದ ತರಬೇತಿ (ಎಕ್ಸಾಸ್ಟಿವ್ ಟ್ರೈನಿಂಗ್) ಇದು ತಂಡವಾರು ನಡೆಯುವ ತರಬೇತಿಯಾಗಿದ್ದು, ಪ್ರಿಸೈಡಿಂಗ್ ಆಫೀಸರ್ ಸೇರಿದಂತೆ ಪೋಲಿಂಗ್ ಅಧಿಕಾರಿಗಳ ಸಂಪೂರ್ಣ ತಂಡವು ಒಟ್ಟಾಗಿ ಪಾಲ್ಗೊಳ್ಳಬೇಕು. ಈ ದಿನ ಕಾನೂನುಬದ್ಧ ದಾಖಲೆಗಳು, ಸ್ಟ್ಯಾಚುಟರಿ ಮತ್ತು ನಾನ್-ಸ್ಟ್ಯಾಚುಟರಿ ಕವರ್ಗಳು ಹಾಗೂ ಇತರೆ ಸಾಮಗ್ರಿಗಳ ಕುರಿತು ಸಮಗ್ರವಾಗಿ ತಿಳಿಸಿಕೊಡಲಾಗುತ್ತದೆ ಎಂದರು.
ಚುನಾವಣಾ ಪ್ರಕ್ರಿಯೆ, ಮತದಾನದ ದಿನದ ನಿರ್ವಹಣೆ ಹಾಗೂ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು.