ಹೊನ್ನಾವರ ಪಟ್ಟಣದಲ್ಲಿಲ್ಲ ಸಿಎನ್‌ಜಿ ಬಂಕ್

KannadaprabhaNewsNetwork |  
Published : Oct 16, 2026, 02:30 AM IST
ಹೊನ್ನಾವರ ನಿಲ್ದಾಣದಲ್ಲಿ ನಿಂತಿರುವ ಆಟೋರಿಕ್ಷಾ | Kannada Prabha

ಸಾರಾಂಶ

ತಾಲೂಕಿನ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಓಡಾಡುವ ಆಟೊ ರಿಕ್ಷಾ ಚಾಲಕರಿಗೆ ಅನುಕೂಲವಾಗುವಂತೆ ಸಿಎನ್‌ಜಿ ಇಂಧನ ತುಂಬಿಸುವ ಸೌಲಭ್ಯವನ್ನು ಪಟ್ಟಣದ ಭಾಗದಲ್ಲಿ ಕಲ್ಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೂ ಇದುವರೆಗೆ ತಾಲೂಕಿನ ಪಟ್ಟಣದ ಭಾಗದಲ್ಲಿ ಸಿಎನ್‌ಜಿ ಬಂಕ್ ನಿರ್ಮಾಣವಾಗಿಲ್ಲ.

ಆಟೋ ಚಾಲಕರಿಗೆ ಹೆಚ್ಚಿನ ಹೊರೆ, ಸಿಎನ್‌ಜಿ ವಾಹನ ಬಳಸಲು ಆಗದ ಸ್ಥಿತಿ

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಓಡಾಡುವ ಆಟೊ ರಿಕ್ಷಾ ಚಾಲಕರಿಗೆ ಅನುಕೂಲವಾಗುವಂತೆ ಸಿಎನ್‌ಜಿ ಇಂಧನ ತುಂಬಿಸುವ ಸೌಲಭ್ಯವನ್ನು ಪಟ್ಟಣದ ಭಾಗದಲ್ಲಿ ಕಲ್ಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೂ ಇದುವರೆಗೆ ತಾಲೂಕಿನ ಪಟ್ಟಣದ ಭಾಗದಲ್ಲಿ ಸಿಎನ್‌ಜಿ ಬಂಕ್ ನಿರ್ಮಾಣವಾಗಿಲ್ಲ.

ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೋಲಿಸಿದರೆ ಕಡಿಮೆ ನಿರ್ವಹಣಾ ವೆಚ್ಚದ ನಿರೀಕ್ಷೆಯಲ್ಲಿ ಅನೇಕರು ಸಿಎನ್‌ಜಿ ವಾಹನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಆದರೆ ವಾಹನಗಳ ಬಳಕೆಗೆ ತಕ್ಕಂತೆ ಇಂಧನ ತುಂಬಿಸುವ ಕೇಂದ್ರಗಳು ಲಭ್ಯವಿಲ್ಲದಿದ್ದರೆ, ಅಂತಹ ವಾಹನಗಳನ್ನು ಬಳಸುವ ಚಾಲಕರಿಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಪ್ರತಿದಿನದ ದುಡಿಮೆಯನ್ನೇ ಅವಲಂಬಿಸಿರುವ ಆಟೊ ಚಾಲಕರಿಗೆ ಇಂಧನಕ್ಕಾಗಿ ಹೆಚ್ಚುವರಿ ಸಮಯ ವ್ಯಯಿಸುವುದು ಆರ್ಥಿಕ ಹೊರೆಯಾಗುತ್ತಿದೆ. ಸಿಎನ್‌ಜಿ ಚಾಲಿತ ವಾಹನಗಳನ್ನು ಬಳಸುವ ರಿಕ್ಷಾ ಚಾಲಕರು ಇಂಧನ ತುಂಬಿಸಲು ದೂರದ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾದರೆ, ಸಮಯ ಮತ್ತು ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಕ್ಷಾ ಚಾಲಕರು ತಮ್ಮಅಳಲು ತೋಡಿಕೊಳ್ಳುತ್ತಾರೆ.

ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66ರ ಸಂಪರ್ಕ ಹೊಂದಿರುವ ಪ್ರಮುಖ ಪಟ್ಟಣವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಜನರು ವಿವಿಧ ಕೆಲಸಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯ ಸಾರಿಗೆ ವ್ಯವಸ್ಥೆಯಲ್ಲಿ ಆಟೊ ರಿಕ್ಷಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಸಂದರ್ಭದಲ್ಲಿ ಸಿಎನ್‌ಜಿ ಇಂಧನ ತುಂಬಿಸುವ ಸೂಕ್ತ ಸೌಲಭ್ಯ ಸ್ಥಳೀಯವಾಗಿ ಲಭ್ಯವಿದ್ದರೆ ಚಾಲಕರಿಗೂ ಅನುಕೂಲವಾಗಲಿದೆ. ಇಂಧನ ತುಂಬಿಸಲು ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಕಡಿಮೆಯಾಗುವ ಜತೆಗೆ ವಾಹನಗಳ ಕಾರ್ಯಾಚರಣೆಗೆ ವ್ಯಯಿಸುವ ಸಮಯವನ್ನೂ ಉಳಿಸಬಹುದು. ಅಲ್ಲದೆ ತಾಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ರಿಕ್ಷಾಗಳಿವೆ. ಪಟ್ಟಣದಲ್ಲಿ ಐನ್ನೂರಕ್ಕೂ ಅಧಿಕ ರಿಕ್ಷಾಗಳು ಓಡಾಡುತ್ತದೆ.

ಈ ಹಿನ್ನೆಲೆಯಲ್ಲಿ ಹೊನ್ನಾವರ ಪಟ್ಟಣದಲ್ಲಿ ಸಿಎನ್‌ಜಿ ಪಂಪ್ ಸ್ಥಾಪಿಸುವ ಸಾಧ್ಯತೆಯನ್ನು ಸಂಬಂಧಪಟ್ಟ ತೈಲ ಮತ್ತು ಅನಿಲ ಕಂಪನಿಗಳು ಪರಿಶೀಲಿಸಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ಇದೀಗ ಹೊನ್ನಾವರ ತಾಲೂಕಿನ ಸುತ್ತಲಿನ ರಿಕ್ಷಾ ಚಾಲಕರು ಹಳದೀಪುರದ ಸಮೀಪದ ಸಾಲೀಕೇರಿ ಬಳಿಯಲ್ಲಿರುವ ಸಿಎನ್‌ಜಿ ಪಂಪ್‌ಗೆ ಹೋಗಿ ಇಂಧನವನ್ನು ತುಂಬಿಸಿಕೊಂಡು ಬರಬೇಕಾಗಿದೆ.

ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಕೇಂದ್ರಗಳ ಲಭ್ಯತೆ ಮತ್ತು ಅವುಗಳ ನಡುವಿನ ಅಂತರವನ್ನು ಗಮನದಲ್ಲಿಟ್ಟುಕೊಂಡು, ಈ ಭಾಗದ ಅಗತ್ಯಕ್ಕೂ ಆದ್ಯತೆ ನೀಡಬೇಕು. ಸಿಎನ್‌ಜಿ ಪಂಪ್ ಸ್ಥಾಪನೆಯಾದರೆ ಆಟೊ ಚಾಲಕರಿಗೆ ಇಂಧನ ಭರಿಸುವ ಅನುಕೂಲ ದೊರೆಯುವುದರ ಜತೆಗೆ, ಪರ್ಯಾಯ ಇಂಧನ ಆಧಾರಿತ ವಾಹನಗಳ ಬಳಕೆಗೂ ಉತ್ತೇಜನ ಸಿಗಬಹುದು.ನಮ್ಮ ಪಕ್ಕದ ತಾಲೂಕು ಕುಮಟಾದಲ್ಲಿ ಸಿಎನ್‌ಜಿ ಇಂಧನ ಪಂಪ್ ಇದೆ. ಆದರೆ ಹೊನ್ನಾವರ ಪಟ್ಟಣದಲ್ಲಿ ಒಂದೂ ಇಲ್ಲ. ನಮಗೆ 7 ಕಿಮೀ ಸಾಗಲು ಮಾತ್ರ ಪರ್ಮಿಟ್ ಇದೆ. ಆದರೆ ಕುಮಟಾಕ್ಕೆ ಹೋಗಿ ಸಿಎನ್‌ಜಿ ಇಂಧನ ತುಂಬಿಸಿಕೊಂಡು ಬರಲು 20ಕ್ಕೂ ಹೆಚ್ಚು ಕಿಮೀ ಸಾಗಬೇಕಾಗುತ್ತದೆ. ನಮ್ಮಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚಿನ ರಿಕ್ಷಾಗಳಿವೆ. ಆದರೆ ಹೊನ್ನಾವರದ ಪಟ್ಟಣದ ವ್ಯಾಪ್ತಿಯಲ್ಲಿ ಸಿಎನ್‌ಜಿ ಘಟಕವಿಲ್ಲ. ಈ ಕುರಿತು ಜನನಾಯಕರ ಗಮನಕ್ಕೂ ತರಲಾಗಿದೆ. ಇದುವರೆಗೂ ಸಿಎನ್‌ಜಿ ಘಟಕದ ನಿರ್ಮಾಣವಾಗಿಲ್ಲ ಎನ್ನುತ್ತಾರೆ ಹೊನ್ನಾವರ ರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ ಶಿವರಾಜ್ ಮೇಸ್ತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರನ್ನವರಾತ್ರಿ ನಿಮಿತ್ತ ದೇವಿ ವಜ್ರಾಭರಣಗಳ ಮೆರವಣಿಗೆ
ಶ್ರೀದೇವಿ ಪುರಾಣದ ತತ್ವ ಅಳವಡಿಕೆ ಬದುಕಿಗೆ ದಾರಿ