ಹೊಸಪೇಟೆ: ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ ಅಪಾರವಾಗಿದ್ದು, ಅವರ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಬೇಕು. ರೈತ ಮಹಿಳೆಯರ ಹೆಸರಿನಲ್ಲಿಯೂ ಜಮೀನಿನ ಖಾತೆ ಹಾಗೂ ದಾಖಲೆಗಳಿದ್ದರೆ ಹೆಚ್ಚಿನ ಸ್ವಾತಂತ್ರ್ಯ, ಆರ್ಥಿಕ ಭದ್ರತೆ ಮತ್ತು ಆತ್ಮವಿಶ್ವಾಸ ದೊರೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸುವ ಮಹಿಳೆಯರಿಗೆ ಜಮೀನಿನ ದಾಖಲೆಗಳಲ್ಲಿ ಮತ್ತು ಆಸ್ತಿಯಲ್ಲಿ ಸಮಾನ ಹಕ್ಕು ಹಾಗೂ ಪ್ರಾಮುಖ್ಯತೆ ಸಿಗಬೇಕು. ಕೃಷಿ ಉತ್ಪಾದನೆಯಲ್ಲಿ ಮಹಿಳೆಯರ ಶ್ರಮ ಅಪಾರವಾಗಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.17ರಷ್ಟು ಕೊಡುಗೆ ನೀಡುತ್ತಿರುವ ಮಹಿಳಾ ಕೃಷಿಕರ ಶ್ರಮ ಗುರುತಿಸಿ ಗೌರವಿಸುವುದು ಹಾಗೂ ಅವರ ಹಕ್ಕು ರಕ್ಷಿಸುವುದು ಎಲ್ಲರ ಕರ್ತವ್ಯ. ರೈತ ಮಹಿಳೆಯರು ಪ್ರಗತಿಪರ ರೈತರಾಗಿ ಗುರುತಿಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ ಎಂದರು.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ರೈತ ಮಹಿಳೆಯರು ಹಲವು ಸವಾಲು ಎದುರಿಸುತ್ತಿದ್ದು, ಅವುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.ಮಹಿಳೆಯರು ತೆಗೆದುಕೊಳ್ಳುವ ನಿರ್ಧಾರ ಅವರ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲವು. ಭವಿಷ್ಯದಲ್ಲಿ ಉತ್ತಮ ಬದಲಾವಣೆ ತಂದುಕೊಳ್ಳುವ ಗುರಿಯೊಂದಿಗೆ ಮುನ್ನಡೆಯಬೇಕು. ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ ಪರಿಶ್ರಮದ ಮೂಲಕ ಪ್ರಗತಿಪರ ರೈತರಾಗಿ ಹೊರಹೊಮ್ಮುವ ಸಂಕಲ್ಪ ಹೊಂದಬೇಕು ಎಂದು ಸಲಹೆ ನೀಡಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಿ ಅವರ ಭವಿಷ್ಯ ಮೊಟಕುಗೊಳಿಸುವ ಬದಲು ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಅವಕಾಶ ಕಲ್ಪಿಸಬೇಕು. ಮಹಿಳೆಯರ ಪರಿಶ್ರಮಕ್ಕೆ ಸೂಕ್ತ ಮನ್ನಣೆ ದೊರೆತಾಗ ಯಶಸ್ವಿ ಮಹಿಳೆಯರಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.
ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಿರಿ ಧಾನ್ಯಗಳಾದ ಸಜ್ಜೆ, ನವಣೆ, ಗೋಧಿ ತನೆ, ಚಪ್ಪರದ ಅವರೆ ಹಾಗೂ ಸಾವಯವ ಉತ್ಪನ್ನಗಳಾದ ಪಪ್ಪಾಯ, ನಿಂಬೆ, ಟೊಮೆಟೊ ಮುಂತಾದ ಸಾವಯವ ಉತ್ಪನ್ನ ಪ್ರದರ್ಶಿಸಲಾಯಿತು. ಅದರಲ್ಲೂ ವಿಶೇಷವಾಗಿ ಬಂಜಾರ ಸಮುದಾಯದ ಕೈ ಕಸೂತಿ ಕಲೆಗಳು, ವಿವಿಧ ಬಗೆಯ ಸೀರೆಗಳು ಮತ್ತು ಬಳೆಗಳು ಕರ ಕುಶಲ ವಸ್ತುಗಳ ನೋಡುಗರ ಆಕರ್ಷಿಸುತ್ತಿದ್ದವು.
ಡಾ. ಪ್ರೊ.ಸುನೀತಾ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ಸಂಸ್ಕರಣೆ, ಮೌಲ್ಯವರ್ಧನೆ ಪ್ರಾಮುಖ್ಯತೆ ಮತ್ತು ಅವಕಾಶಗಳ ಕುರಿತು ಉಪನ್ಯಾಸ ನೀಡಿದರು