ಯೋಗವನ್ನು ಯಜ್ಞದಂತೆ ಸಾಧನೆ ಮಾಡಿ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Jun 21, 2024 1:03 AM

ಸಾರಾಂಶ

ಯಜ್ಞಗಳ ಸಾಲಿನಲ್ಲಿ ಯೋಗವೂ ಒಂದು ಯಜ್ಞ ಎಂಬ ಉಲ್ಲೇಖವಿದೆ. ಇದನ್ನು ಯಜ್ಞವನ್ನಾಗಿ ಮಾಡಬೇಕು. ಯೋಗವನ್ನು ಹೀಗೆ ಮಾಡಬೇಕು ಎಂಬ ಕ್ರಮದಂತೆ ಮಾಡಬೇಕು.

ಶಿರಸಿ: ಯೋಗವನ್ನು ಒಂದು ಯಜ್ಞವಾಗಿಸಿ ಸಾಧನೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಾಲೂಕಿನ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಮಠದ ಮಹಾ ಪಾಠ ಶಾಲೆ, ಸೋಂದಾ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿನ ಯೋಗೋತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.ಯಜ್ಞಗಳ ಸಾಲಿನಲ್ಲಿ ಯೋಗವೂ ಒಂದು ಯಜ್ಞ ಎಂಬ ಉಲ್ಲೇಖವಿದೆ. ಇದನ್ನು ಯಜ್ಞವನ್ನಾಗಿ ಮಾಡಬೇಕು. ಯೋಗವನ್ನು ಹೀಗೆ ಮಾಡಬೇಕು ಎಂಬ ಕ್ರಮದಂತೇ ಮಾಡಬೇಕು. ಹಲವು ಕ್ರಮ ಇದ್ದರೂ ಯಾವುದಾದರೂ ಒಂದು ಕ್ರಮ ನಾವು ಪಾಲಿಸಬೇಕು. ಯಾವುದೇ ಆಸನ, ಪ್ರಾಣಾಯಾಮ ಮನಸ್ಸು ಕೊಟ್ಟು ಮಾಡಬೇಕು. ಯೋಗದ ಕೊನೆಯಲ್ಲಿ ದೇವರಿಗೆ ಈಶ್ವರಾರ್ಪಣೆ ದೃಷ್ಟಿಯಲ್ಲಿ ಅರ್ಪಣೆ ಮಾಡಬೇಕು. ಈ ಮೂರು ಯೋಗದಲ್ಲಿ ಆಳವಡಿಸಿಕೊಂಡರೆ ಯೋಗವೂ ಒಂದು ಯಜ್ಞವಾಗುತ್ತದೆ. ಅದರಿಂದ ಆರೋಗ್ಯದ ಜತೆ ಆಧ್ಯಾತ್ಮಿಕ ಪ್ರಯೋಜನ ಇದೆ. ಚಿತ್ತದ ಶುದ್ಧಿ, ಜ್ಞಾನ ಪ್ರಾಪ್ತಿಗಳಿವೆ ಎಂದರು.ಯೋಗ ಸ್ವರೂಪಿ ಪರಮಾತ್ಮ. ನಿದ್ರೆಯ, ಉಸಿರಾಟದದಲ್ಲಿ ಹಿಡಿತ ಯೋಗ ಸಾಧಕರಿಗೆ ಸಿಗುತ್ತದೆ. ಸತತ ಸಂತೃಪ್ತ ಇರುತ್ತದೆ. ಇಂದ್ರೀಯ ಸಮೂಹ ಮೇಲೆ ಹತೋಟಿ ಇರುತ್ತದೆ.ಯೋಗದ ಅಂತಿಮ ಪ್ರಯೋಜನ ಎಂದರೆ ಪರಮಾತ್ಮನ ಜ್ಯೋತಿ ಕಾಣುತ್ತದೆ ಎಂದೂ ಬಣ್ಣಿಸಿದ ಶ್ರೀಗಳು, ಯೋಗವನ್ನು ಯೋಗದ ದಿನ ಮಾತ್ರ ಮಾಡಬಾರದು. ಪ್ರತಿ ದಿನವೂ ಯೋಗ ಮಾಡಬೇಕು ಎಂದು ಯೋಗ ದಿನಾಚರಣೆ ಸೂಚಿಸುತ್ತದೆ. ನಿತ್ಯವೂ ಕ್ರಮ ಬದ್ಧವಾಗಿ ಯೋಗಾನುಷ್ಠಾನ ಮಾಡಬೇಕು ಎಂದರು.ಈ ವೇಳೆ ಶ್ರೀಮಠದ ಕಿರಿಯ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು. ಬಳಿಕ ಉಭಯ ಶ್ರೀಗಳ ಜತೆಗೆ ಮಠದ ಶಿಷ್ಯರು, ಸಾರ್ವಜನಿಕರು, ಪಾಠಶಾಲೆಯ ಸಮಸ್ತರು ಯೋಗೋತ್ಸವದಲ್ಲಿ ಭಾಗವಹಿಸಿದ್ದರು.ರಘುರಾಮ ಹೆಗಡೆ‌ ಯೋಗ ಹೇಳಿಕೊಟ್ಟರು.

Share this article