ಮೊಬೈಲ್‌ ದೂರವಿಟ್ಟು ಅಧ್ಯಯನ ನಡೆಸಿದರೆ ಸಾಧನೆ ಸಾಧ್ಯ

KannadaprabhaNewsNetwork | Published : Jun 21, 2024 1:03 AM

ಸಾರಾಂಶ

ಮೊಬೈಲ್‌ ದೂರವಿಟ್ಟು ಅಧ್ಯಯನ ನಡೆಸಿದರೆ ಸಾಧನೆ ಸಾಧ್ಯ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಯಾರು ತಮ್ಮ ಜೀವನದಲ್ಲಿ ಕೊನೆಯವರೆಗೂ ಶಿಸ್ತು, ಸಂಯಮ, ನಯ-ವಿನಯ ಹಾಗೂ ಜಾಗರೂಕತೆಯಿಂದ ಜೀವನ ಸಾಗಿಸುತ್ತಾರೋ ಅಂತಹವರ ಹತ್ತಿರ ಅಪರಾಧ ಎಂದಿಗೂ ಸುಳಿಯಲು ಸಾಧ್ಯವಿಲ್ಲ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮ, ಕಾನೂನಿನ ನೆರವು ಮತ್ತು ಶಿಕ್ಷೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಜನಾಂಗವು ಡ್ರಗ್ಸ್, ಅಫೀಮು, ಗಾಂಜಾ ಮತ್ತು ಅಂತರ್ಜಾಲ ಆಟಗಳಿಗೆ ಮರುಳಾಗಿ ಬೆಲೆಕಟ್ಟಲಾಗದ ತಮ್ಮ ಅಮೂಲ್ಯವಾದ ಶರೀರವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವ. ಪ್ರತಿಯೊಬ್ಬ ಯುವಕ-ಯುವತಿಯರು ಸಮಾಜ ಹಾಗೂ ದೇಶ ಮೆಚ್ಚುವಂತಹ ಸಾಧನೆ ಮಾಡುವದು ತುಂಬಾ ಅಗತ್ಯವಿದೆ. ಇವರು ಆದಷ್ಟು ಮೊಬೈಲ್‌ಗಳಿಂದ ದೂರವಿದ್ದುಕೊಂಡು ನಿರಂತರವಾಗಿ ಅಧ್ಯಯನ ಮಾಡಿದರೆ ಇಂತಹ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳಿಂದ ಸಮಾಜ ಮುಕ್ತವಾಗಬೇಕಾದರೆ ಪ್ರತಿಯೊಬ್ಬ ಪುರುಷನು ಮಹಿಳೆಯರನ್ನು ತನ್ನ ಸಹೋದರಿ ಎಂಬ ಭಾವನೆಯಿಂದ ಕಾಣುವ ಅಗತ್ಯವಿದೆ. ಯಾರು ಕೂಡ ಕಾನೂನನ್ನು ಕೈಗೆತ್ತಿಗೊಳ್ಳಬಾರದು. ಒಂದು ವೇಳೆ ಕಾನೂನು ಕೈಗೆತ್ತಿಗೊಂಡರೆ ಅವರು ಘೋರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಸಮಾಜದಲ್ಲಿ ಕಂಡುಬರುವ ಅಪರಾಧಗಳ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಮಾತನಾಡಿದರು. ವೇದಿಕೆಯಲ್ಲಿ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಸಿ.ಸಿಂಪಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್‌.ಎ.ಪವಾರ ಇದ್ದರು. ಕಾರ್ಯಕ್ರಮದಲ್ಲಿ ಮೂರು ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ಭಾಗವಹಿಸಿದ್ದರು.

Share this article