ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ

KannadaprabhaNewsNetwork |  
Published : Feb 22, 2026, 02:45 AM IST
ರಾಷ್ಟಿçÃಯ ಹೆದ್ದಾರಿ ಚತುಷ್ಪಥ ಕಾಮಗಾರಿ : ಶಿರಾಡಿ ನೆಲ್ಯಾಡಿ ಪರಿಸರದ  ಆನೆ ದಾಟು ಕಾಮಗಾರಿ ಪೂರ್ಣ | Kannada Prabha

ಸಾರಾಂಶ

ಪಶ್ಚಿಮಘಟ್ಟದ ತಪ್ಪಲು ಪ್ರದೇಶವಾಗಿರುವ ಶಿರಾಡಿ-ಶಿಶಿಲ ರಕ್ಷಿತಾರಣ್ಯವನ್ನೊಳಗೊಂಡ ಪ್ರದೇಶದಲ್ಲಿ ಹಾದುಹೋಗುವ ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ತನಕ ಲಾವತಡ್ಕ ಅಥವಾ ಮಣ್ಣಗುಂಡಿ, ಪೆರಿಯ ಶಾಂತಿ, ಅಡ್ಡಹೊಳೆ ಈ ೩ ಕಡೆಯಲ್ಲಿ ಆನೆ ದಾಟು ಯೋಜನೆ ಮಂಜೂರಾಗಿದ್ದು, ಈ ಪೈಕಿ ಪೆರಿಯಶಾಂತಿ ಮತ್ತು ಅಡ್ಡಹೊಳೆಗಳಲ್ಲಿನ ಆನೆದಾಟು ಯೋಜನೆ ಕಾಮಗಾರಿ ಪೂರ್ಣಗೊಂಡಿದೆ.

ಉಪ್ಪಿನಂಗಡಿ: ಪಶ್ಚಿಮಘಟ್ಟದ ತಪ್ಪಲು ಪ್ರದೇಶವಾಗಿರುವ ಶಿರಾಡಿ-ಶಿಶಿಲ ರಕ್ಷಿತಾರಣ್ಯವನ್ನೊಳಗೊಂಡ ಪ್ರದೇಶದಲ್ಲಿ ಹಾದುಹೋಗುವ ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ತನಕ ಲಾವತಡ್ಕ ಅಥವಾ ಮಣ್ಣಗುಂಡಿ, ಪೆರಿಯ ಶಾಂತಿ, ಅಡ್ಡಹೊಳೆ ಈ ೩ ಕಡೆಯಲ್ಲಿ ಆನೆ ದಾಟು ಯೋಜನೆ ಮಂಜೂರಾಗಿದ್ದು, ಈ ಪೈಕಿ ಪೆರಿಯಶಾಂತಿ ಮತ್ತು ಅಡ್ಡಹೊಳೆಗಳಲ್ಲಿನ ಆನೆದಾಟು ಯೋಜನೆ ಕಾಮಗಾರಿ ಪೂರ್ಣಗೊಂಡಿದೆ.ಪೆರಿಯಶಾಂತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಮೇಲ್ಸೇತುವೆ ಮೇಲೆ ಹಾದು ಹೋಗುತ್ತದೆ. ಇದರ ಬದಿಯಲ್ಲಿ ನೆಲದ ಅಂತರದಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಕವಲೊಡೆದು ಹಾದು ಹೋಗುತ್ತದೆ. ಇದರಿಂದ ಸುಮಾರು ೩೦೦ ಮೀಟರ್ ದೂರಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಮೀಸಲು ರಕ್ಷಿತಾರಣ್ಯದ ಮಧ್ಯೆ ತೋಡು ಹರಿದು ಹೋಗುತ್ತಿದೆ. ಆನೆಗಳಿಗೆ ನೀರು ಕುಡಿಯಲು ಈ ತೋಡು ಉಪಯೋಗ ಆಗುವ ರೀತಿಯಲ್ಲಿ ಅಂಡರ್ ಪಾಸ್‌ ರೀತಿಯಲ್ಲಿ ಆನೆ ದಾಟು ನಿರ್ಮಾಣವಾಗಿದೆ. ಅಡ್ಡಹೊಳೆಯಲ್ಲೂ ಇದೇ ರೀತಿಯಾಗಿ ನಿರ್ಮಾಣವಾಗಿದೆ.

ಪೆರಿಯಶಾಂತಿಯಲ್ಲಿ ನಿರ್ಮಾಣವಾಗಿರುವ ಆನೆ ದಾಟು ೧೨ ಅಡಿ ಅಗಲ ಮತ್ತು ಸುಮಾರು ೭೦ ಮೀಟರ್ ಉದ್ದವಿದೆ. ೩ ಕಡೆ ಪಿಲ್ಲರ್ ಹಾಕಿ ೩ ಹಂತದಲ್ಲಿ ದಾಟು ನಿರ್ಮಿಸಲಾಗಿದೆ. ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್‌ನ್ನು ೧೫ ಮೀಟರ್ ಅಂತರದಲ್ಲಿ ನಿರ್ಮಿಸಲಾಗಿದೆ. ಸಹಜವಾಗಿ ಆನೆಗಳು ಹಿಂಡುಗಳಾಗಿ ಹೋಗುವುದಕ್ಕೂ ಸಾಧ್ಯವಾಗುವ ರೀತಿಯಲ್ಲಿ ದಾಟು ನಿರ್ಮಾಣವಾಗಿದೆ ಎಂದು ಕಾಮಗಾರಿ ನಿರ್ವಹಿಸಿರುವ ಔತಾಡೆ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಮಣ್ಣಗುಂಡಿಯಿಂದ ಶಿರಾಡಿಯ ಅಡ್ಡಹೊಳೆ ತನಕ ಹತ್ತಾರು ಕಡೆಯಲ್ಲಿ ಆನೆಗಳು ಅದರ ಪಾಡಿಗೆ ರಸ್ತೆ ದಾಟಿ ಹೋಗುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡು ಆಗುವುದರೊಂದಿಗೆ ಮೊದಲಿನ ರೀತಿಯಲ್ಲಿ ಆನೆಗಳಿಗೆ ರಸ್ತೆ ದಾಟಲು ಆಗದೆ ದಾರಿ ತೋಚದಾಗಿದೆ. ಹೀಗಾಗಿ ಆನೆಗಳು ತನಗೆ ಸರಿಯಾಗಿ ನೀರು, ಆಹಾರ ಸಿಗದ ಕಾರಣಕ್ಕಾಗಿ ಕೃಷಿ ತೋಟದೊಳಗೆ ನುಗ್ಗಿ ಸಂಘರ್ಷ ಉಂಟು ಮಾಡುತ್ತವೆ. ಇದನ್ನು ತಪ್ಪಿಸಲು ಚತುಷ್ಪಥ ಹೆದ್ದಾರಿಯ ಆಯ್ದ ಭಾಗಗಳಲ್ಲಿ ಆನೆ ದಾಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ತನ್ಮೂಲಕ ಆನೆಗಳ ಆಕ್ರೋಶ ಭರಿತ ಸಂಚಾರಕ್ಕೆ ತಡೆಯೊಡ್ದಲಾಗಿದೆ. ಮಣ್ಣಗುಂಡಿಯಿಂದ ಸಕಲೇಶಪುರ ತನಕವೂ ಅಲ್ಲಲ್ಲಿ ಆನೆ ದಾಟು ಅಗತ್ಯ ಇದೆ. ಇದು ಕೇವಲ ಆನೆ ದಾಟುವುದಕ್ಕೆ ಮಾತ್ರ ಅಲ್ಲ, ಕಾಡು ಪ್ರಾಣಿಗಳಾದ ಜಿಂಕೆ, ಕಡವೆ, ಕಾಡುಕೋಣಗಳಿಗೂ ಇದರಿಂದ ಪ್ರಯೋಜನವಾಗಲಿದೆ. -ಭುವನೇಶ್ ಕೈಕಂಬ, ವನ್ಯಜೀವಿ ಪರಿಣತರು ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ೩ ಯಾ ೪ ಹಿಂಡುಗಳಾಗಿ ಆನೆಗಳಿವೆ. ಆದರೆ ಇವುಗಳ ಮೂಲ ಈ ಪ್ರದೇಶಗಳಾಗಿರುವುದಿಲ್ಲ. ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆಂಜ, ಶಿಶಿಲ, ರೆಖ್ಯ, ಪೋರ್ಕಳ, ಗುಂಡ್ಯ, ಶಿರಾಡಿ, ಅಡ್ಡಹೊಳೆ, ಬಂದಾರು ಹೀಗೆ ಈ ಪ್ರದೇಶದಲ್ಲಿ ೧೦ಕ್ಕೂ ಅಧಿಕ ಆನೆಗಳು ಇವೆ. ಇನ್ನು ಪಂಜ, ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಿಂದಲೂ ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಹೀಗಾಗಿ ಹೆದ್ದಾರಿಯಲ್ಲಿ ೩ ಕಡೆ ಆನೆ ದಾಟು ಮಾಡಿರುವುದು ಕಡಿಮೆ ಆಗಿದ್ದು, ಇನ್ನೂ ಕನಿಷ್ಠ ೩ ಆಗಬೇಕಾಗಿತ್ತು.

-ರಾಘವೇಂದ್ರ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಹೆದ್ದಾರಿ ವಿಸ್ತರಣೆಗೊಂಡು ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಅಪಘಾತ ಸಂಭವಿಸುವುದನ್ನು ತಪ್ಪಿಸಲು ಆನೆ ದಾಟು ಯೋಜನೆ ಅಳವಡಿಸಿರುವುದು ಶ್ಲಾಘನೀಯ. ಆದರೆ ಅದು ಸಾಕಷ್ಟು ಪ್ರಮಾಣದಲ್ಲಿರಬೇಕಿತ್ತು. -ಕಂಗ್ವೆ ವಿಶ್ಬನಾಥ ಶೆಟ್ಟಿ

ಪರಿಸರ ಪ್ರೇಮಿ, ಸಾಮಾಜಿಕ ಕಾರ್ಯಕರ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಣೂರು ವಿದ್ಯಾರಶ್ಮಿ ಕಾಲೇಜು: ಆರೋಗ್ಯ ಮಾಹಿತಿ ಕಾರ್ಯಕ್ರಮ
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ನಾಯಕರ ತರಬೇತಿ, ಕಿಟ್‌ ವಿತರಣೆ