ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿರುವ ವಿಜಯನಗರ ಜಿಲ್ಲಾಡಳಿತ ಮೂಲ ಸೌಕರ್ಯದ ವಿಷಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸದೇ; ಶಾಶ್ವತ ವ್ಯವಸ್ಥೆಗೆ ಒತ್ತು ನೀಡಿದೆ. ಹಾಗಾಗಿ ಹಂಪಿಯ ಸ್ಮಾರಕಗಳ ಬಳಿ ಈಗ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆಯಾಗಿದೆ.ಹಂಪಿ ಎಂದರೆ ರಣಬಿಸಿಲು, ಕುಡಿಯುವ ನೀರು ಕೂಡ ಸಿಗುವುದಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಿತ್ತು. ಜಿ- 20 ಶೃಂಗಸಭೆ ಹಾಗೂ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್‌ನಿಂದ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡಿದೆ. ಹಂಪಿಯಲ್ಲಿ ಉತ್ಸವದ ವೇಳೆ ಬರೀ ತಾತ್ಕಾಲಿಕ ವ್ಯವಸ್ಥೆ ಮಾಡುವುದಕ್ಕಿಂತ ಪ್ರವಾಸಿಗರಿಗೆ ವರ್ಷವೀಡಿ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡೋಣ ಎಂಬ ದಿಸೆಯಲ್ಲಿ ಶಾಶ್ವತ ಯೋಜನೆಗೆ ಜಿಲ್ಲಾಡಳಿತ ಒತ್ತು ನೀಡಿದೆ.
ಭಾರತೀಯ ಪುರಾತತ್ವ ಇಲಾಖೆ ಸಹಕಾರದೊಂದಿಗೆ ಸ್ಮಾರಕಗಳ ಬಳಿಯೇ ಕುಡಿಯುವ ನೀರಿನ ವ್ಯವಸ್ಥೆಯೂ ಆಗಿದೆ. ಫೆ. 2, 3 ಮತ್ತು 4ರಂದು ನಡೆಯಲಿರುವ ಉತ್ಸವಕ್ಕೆ ಜನಸಾಗರವೇ ಹರಿದು ಬರುವ ನಿರೀಕ್ಷೆ ಇದೆ. ಹಾಗಾಗಿ ಈಗ ಮೂಲ ಸೌಕರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಿದೆ.ಎಲ್ಲೆಲ್ಲಿ ಶುದ್ಧ ಕುಡಿಯುವ ನೀರು ಲಭ್ಯ?: ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠ್ಠಲ ದೇವಾಲಯದ ದಕ್ಷಿಣ ದ್ವಾರ, ಗೆಜ್ಜಲ ಮಂಟಪ, ಕಮಲ ಮಹಲ್, ಕೃಷ್ಣ ದೇವಾಲಯದ ಹಿಂಬದಿ, ರಾಣಿ ಸ್ನಾನಗೃಹ ಸ್ಮಾರಕಗಳ ಬಳಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಕಮಲ ಮಹಲ್, ಗೆಜ್ಜಲ ಮಂಟಪ, ಶ್ರೀಕೃಷ್ಣ ದೇವಾಲಯದ ಬಳಿ ಶಾಶ್ವತ ಶೌಚಾಲಯದ ವ್ಯವಸ್ಥೆಯೂ ಮಾಡಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಶಾಶ್ವತವಾಗಿ ಶೌಚಾಲಯ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಆಲೋಚನೆಯೂ ತಳೆಯಲಾಗಿದೆ.ಈ ಬಾರಿ ಹಂಪಿ ಉತ್ಸವದ ಪೂರ್ವಭಾವಿ ಸಭೆಯಲ್ಲೂ ಶಾಶ್ವತ ವ್ಯವಸ್ಥೆಗೆ ಆದ್ಯತೆ ನೀಡಲು ಸ್ವತಃ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರೇ ಸೂಚಿಸಿದ್ದಾರೆ. ಹಾಗಾಗಿ ಈಗ ಹಂಪಿಯಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ದೃಷ್ಟಿಕೋನದೊಂದಿಗೆ ಉತ್ಸವದ ತಯಾರಿ ನಡೆಸಲಾಗುತ್ತಿದೆ.
ತಾತ್ಕಾಲಿಕ ವ್ಯವಸ್ಥೆಗೆ ಕಡಿವಾಣ: ಈ ಹಿಂದಿನ ಹಂಪಿ ಉತ್ಸವದ ವೇಳೆಯಲ್ಲಿ ಮೂರು ದಿನಗಳ ಉತ್ಸವದ ದೃಷ್ಟಿಕೋನದೊಂದಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ತಾತ್ಕಾಲಿಕ ವ್ಯವಸ್ಥೆ ಜತೆಗೆ ಶಾಶ್ವತ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಮೊಬೈಲ್ ಶೌಚಾಲಯದ ಜತೆಗೆ ಶಾಶ್ವತ ಶೌಚಾಲಯಗಳು ಕೂಡ ಹಂಪಿಯಲ್ಲಿ ದೊರೆಯಲಿದೆ. ಪ್ರವಾಸಿಗರಿಗೆ ಮೂಲ ಸೌಕರ್ಯಕ್ಕಾಗಿ ಗೆಜ್ಜಲ ಮಂಟಪದ ಬಳಿ ಕ್ಯಾಂಟಿನ್ ವ್ಯವಸ್ಥೆಯೂ ಮಾಡಲಾಗಿದೆ.ಪ್ರವಾಸಿಗರಿಗೆ ಆದ್ಯತೆ: ಹಂಪಿ ಉತ್ಸವದಲ್ಲಿ ಬರೀ ತಾತ್ಕಾಲಿಕ ವ್ಯವಸ್ಥೆಗೆ ಆದ್ಯತೆ ನೀಡದೆ ಶಾಶ್ವತ ಯೋಜನೆಗೆ ಆದ್ಯತೆಗೆ ನೀಡಲಾಗುವುದು. ಮೂಲ ಸೌಕರ್ಯಕ್ಕೆ ಒತ್ತು ನೀಡುವಾಗ ಪ್ರವಾಸಿಗರನ್ನು ಕೇಂದ್ರೀಕರಿಸಿಯೇ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಂಪಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಟಿಕೆಟ್ ಕೌಂಟರ್‌ಗಳ ಹೆಚ್ಚಳ, ಶೌಚಾಲಯ ವ್ಯವಸ್ಥೆಯೂ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.