ಕರಾವಳಿ ತೀರ ಪ್ರದೇಶವನ್ನು ಯಾವ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಯೋಗ್ಯವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯ ಎನ್ನುವ ಕುರಿತು ನೀಲಿ ನಕಾಶೆ ತಯಾರಿಸುವ ಕುರಿತು ಶೀಘ್ರದಲ್ಲಿಯೇ ತಜ್ಞರೊಂದಿಗೆ ಸಭೆ ನಡೆಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಶ್ರದ್ಧೆ ಹಾಗೂ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಕರಾವಳಿ ಭಾಗದ ಜನರ ಸಹಕಾರದಲ್ಲಿ ಕಡಲ ತೀರಗಳಲ್ಲದೆ, ಹಿನ್ನೀರು ಪ್ರದೇಶಗಳಲ್ಲಿಯೂ ಪ್ರವಾಸೋದ್ಯಮ ಉತ್ತೇಜಿಸಲು, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಪ್ರವಾಸೋದ್ಯಮ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದರು.ಕೋಡಿಯ ಬ್ಯಾರೀಸ್ ಕಾಲೇಜಿನಲ್ಲಿ ಭಾನುವಾರ ನಡೆದ ಸಮಾರಂಭಕ್ಕೆ ಆಗಮಿಸಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕರ್ನಾಟಕ ರಾಜ್ಯದ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳ ಅಂದಾಜು 320 ಕಿ.ಮೀ. ಉದ್ದದ ಕರಾವಳಿ ತೀರ ಪ್ರದೇಶವನ್ನು ಯಾವ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಯೋಗ್ಯವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯ ಎನ್ನುವ ಕುರಿತು ನೀಲಿ ನಕಾಶೆ ತಯಾರಿಸುವ ಕುರಿತು ಶೀಘ್ರದಲ್ಲಿಯೇ ತಜ್ಞರೊಂದಿಗೆ ಸಭೆ ನಡೆಸಲಾಗುವುದು. ಕರಾವಳಿ ತೀರ ಪ್ರದೇಶದಲ್ಲಿ ಪ್ರವಾಸಿಗರ ಮೆಚ್ಚುಗೆಗೆ ಕಾರಣವಾಗಿರುವ ಸಿಲ್ವರ್ ಸ್ಯಾಂಡ್ ಹಾಗೂ ಉದ್ದನೆಯ ಸ್ವಚ್ಛ ತೀರ ಪ್ರದೇಶಗಳ ಕುರಿತು ಈಗಷ್ಟೇ ನನಗೆ ಮಾಹಿತಿ ದೊರಕಿದೆ. ಈ ಪ್ರದೇಶವನ್ನು ಯಾವ ರೀತಿಯಲ್ಲಿ ಆದಾಯದಾಯಕ ಹಾಗೂ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.
ತಜ್ಞರ ಸಭೆಯಲ್ಲಿ ಮೂಡಿ ಬರುವ ಅಭಿಪ್ರಾಯಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆದು ಮುಂದಿನ ಮಾರ್ಚ್-ಏಪ್ರಿಲ್ ಒಳಗೆ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮೂರು ಹಂತದಲ್ಲಿ ಯೋಜನೆ ಕೈಗೊಳ್ಳುವ ಬಗ್ಗೆ ಹಾಗೂ ಪಿಪಿಪಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಸಾಧ್ಯತೆ ಬಗ್ಗೆಯೂ ಪರಿಶೀಲಿಸಲಾಗುವುದು. ಸಾಹಸ ಜಲಕ್ರೀಡೆಗಳ ಬಗ್ಗೆಯೂ ಜನರಿಗೆ ಹೆಚ್ಚಿನ ಆಸಕ್ತಿ ಇರೋದರಿಂದ ಈ ನಿಟ್ಟಿನಲ್ಲಿಯೂ ಯೋಜನೆ ರೂಪಿಸಲಾಗುವುದು ಎಂದರು.ಅಳಿವಿನಂಚಿನಲ್ಲಿ ಇರುವ ಕಡಲಾಮೆಗಳ ಪ್ರಬೇಧಗಳನ್ನು ರಕ್ಷಣೆ ಮಾಡಲು ಹಾಗೂ ಗಾಯಗೊಂಡಿರುವ ಕಡಲಾಮೆಗಳಿಗೆ ಚಿಕಿತ್ಸೆ ನೀಡಲು ತುರ್ತು ಆರೋಗ್ಯ ರಕ್ಷಣಾ ಕೇಂದ್ರಗಳನ್ನು ತೆರೆಯುವ ಕುರಿತು ಅರಣ್ಯ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಿ, ತೀರ್ಮಾನ ಕೈಗೊಳ್ಳಲಾಗುವು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.