ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಯಲಬುರ್ಗಾ ಹಾಗೂ ಕುಕನೂರು ಪಟ್ಟಣದ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆಯಡಿ ತುಂಗಭದ್ರಾ ಜಲಾಯಶಯದಿಂದ ಸಂಯುಕ್ತ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೊಳಿಸಿದೆ. ಪಟ್ಟಣಗಳ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ಯೋಜನೆ ಸಾಕಾರಗೊಳಿಸಿದ ಕೀರ್ತಿ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಸಲ್ಲುತ್ತದೆ.ಅವಳಿ ಪಟ್ಟಣಗಳು ಜಿಲ್ಲೆಯ ತಾಲೂಕು ಕೇಂದ್ರಗಳಾಗಿವೆ. ಪ್ರಸ್ತುತ ಯಲಬುರ್ಗಾದ ೧೯೩೬೭, ಕುಕನೂರು ಪಟ್ಟಣದ ೨೨೬೧೩ ಜನಸಂಖ್ಯೆ ಇದೆ. ಈ ಯೋಜನೆಯಡಿ ಮಧ್ಯದಲ್ಲಿ ಬರುವ ತಳಕಲ್, ತಳಬಾಳ, ಭಾನಾಪುರ ಹಾಗೂ ವಿವಿಧ ಶಾಲಾ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ತರಬೇತಿ ಕೇಂದ್ರ, ತಳಕಲ್ ರೈಲ್ವೆ ನಿಲ್ದಾಣ ಮತ್ತು ಆಟಿಕೆ ಕ್ಲಸ್ಟರ್ ಇಂಡಸ್ಟ್ರಿ ಜನಸಂಖ್ಯೆ ಪರಿಗಣಿಸಲಾಗಿದೆ.
ಪ್ರಸ್ತುತ ಯಲಬುರ್ಗಾಕ್ಕೆ ಹಿರೇಹಳ್ಳ ಜಲಾಶಯದಿಂದ ಕೊಳವೆ ನೀರು ಸರಬರಾಜು ಯೋಜನೆಯಡಿ ೨.೭೦ ದಶಲಕ್ಷ ಲೀ. ಸಾಮರ್ಥ್ಯದ ಕಲ್ಲೂರು ಹತ್ತಿರ ಜಲಶುದ್ಧೀಕರಣ ಘಟಕದಿಂದ ನೀರು ಪೂರೈಸಲಾಗುತ್ತಿದೆ. ಕುಕನೂರಿಗೆ ಬೋರ್‌ವೆಲ್ ಮತ್ತು ತೆರೆದ ಬಾವಿಗಳ ಮೂಲದಿಂದ ೭೦ ಎಲ್‌ಪಿಸಿಡಿಯಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆಯ ಮಾರ್ಗ ಮಧ್ಯೆ ಬರುವ ಜನವಸತಿ ಪ್ರದೇಶ ಹಾಗೂ ಶಿಕ್ಷಣ ಸಂಸ್ಥೆಗಳು, ಇಂಡಸ್ಟ್ರಿಗೆ ಬೋರ್‌ವೆಲ್ ಮೂಲಗಳಿಂದ ೫೦ ಎಲ್‌ಪಿಸಿಡಿಯಂತೆ ನೀರು ಪೂರೈಸಲಾಗುತ್ತಿದೆ.₹೨೬೯.೧೨ ಕೋಟಿ ಅನುದಾನ:೨೦೨೩, ಡಿ. ೧ರಂದು ರಾಜ್ಯ ಸರ್ಕಾರದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ₹೨೬೯.೧೨ ಕೋಟಿಗಳ ವೆಚ್ಚದಲ್ಲಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಗೆ ಒಳಪಡುವ ಈ ಯೋಜನೆ ಬೆಂಗಳೂರಿನ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದೆ.
ಜಲಸಂಗ್ರಹಗಾರ ಕಾಮಗಾರಿ ಪ್ರಗತಿ:ಯಲಬುರ್ಗಾದ ೫೨೦೪ ಮನೆ, ಕುಕನೂರಿನ ೬೧೦೮ ಮನೆಗೆ ನಲ್ಲಿಯ ಸಂಪರ್ಕ ಕಲ್ಪಿಸುವ ಜತೆಗೆ ನೀರಿನ ಅನವಶ್ಯಕ ಪೋಲು ತಡೆಯಲು ಮೀಟರ್ ಅಳವಡಿಸಲಾಗುತ್ತದೆ. ೫ ವರ್ಷಗಳ ವರೆಗೆ ನೀರು ಪೂರೈಕೆ ಮತ್ತು ವಿತರಣಾ ವ್ಯವಸ್ಥೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊಣೆ ಹೊತ್ತ ಏಜನ್ಸಿ ನೋಡಿಕೊಳ್ಳುತ್ತದೆ.ಅವಳಿ ಪಟ್ಟಣಗಳ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಕೇಂದ್ರ ಪುರಸ್ಕೃತ ೨.೦ ಅಮೃತ ಯೋಜನೆ ಜಾರಿಗೊಂಡಿದೆ. ದೂರದೃಷ್ಟಿ ಯೋಜನೆಯಾಗಿದ್ದು, ಶಾಸಕ ಬಸವರಾಜ ರಾಯರಡ್ಡಿ ಶ್ರಮ ಸಾಕಷ್ಟಿದೆ. ಯಲಬುರ್ಗಾದಲ್ಲಿ ೧೦ ಲಕ್ಷ ಲೀ. ಮತ್ತು ೫ ಲಕ್ಷ ಲೀ ಸಾಮರ್ಥ್ಯದ ಜಲಸಂಗ್ರಹಗಾರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಯಲಬುರ್ಗಾ ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ₹೬೭೦ ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದೆ. ಈಗ ಯಲಬುರ್ಗಾ ಮತ್ತು ಕುಕನೂರು ಪಟ್ಟಣಕ್ಕೆ ಅಮೃತ ೨.೦ ಯೋಜನೆಯಡಿ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಸಾರ್ವಜನಿಕರ ಸಹಕಾರದಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ಶೀಘ್ರದಲ್ಲೇ ಶುದ್ಧ ನೀರು ಪೂರೈಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳ ಸಹಾಯಕ ಕಾರ್ಯಪಾಲಕ ಅಭಿಯಂತರ, ಕ.ನ.ನೀ.ಸ ಮತ್ತು ಒಳಚರಂಡಿ ಇಲಾಖೆ ಎಂ. ಸುಕಮುನಿ ತಿಳಿಸಿದ್ದಾರೆ.ಮುಂದಿನ ೨೦೫೫ನೇ ಇಸ್ವಿಯ ಜನಸಂಖ್ಯೆಯ ದೂರದೃಷ್ಟಿಯ ಆಧಾರವಾಗಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ ೧೩೫ ಲೀ.ನಂತೆ ಮಧ್ಯಂತರ ಬೇಡಿಕೆ ೧೭.೪೯ ಎಂಎಲ್‌ಡಿ ಹಾಗೂ ಅಂತಿಮ ಬೇಡಿಕೆ ೨೦.೮೨ ಎಂಎಲ್‌ಡಿಯಂತೆ ಯೋಜನೆ ವಿನ್ಯಾಸಗೊಳಿಸಲಾಗಿದೆ. ೨೦೫೫ರ ಹೊತ್ತಿಗೆ ೧,೩೪,೩೬೬ ಜನಸಂಖ್ಯೆಗೆ ನೀರು ಪೂರೈಸುವ ಉದ್ದೇಶ ಇದಾಗಿದೆ ಎಂದು ಜೆಇ, ಕ.ನ.ನೀ.ಸ. ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿ ಯಲ್ಲಪ್ಪ ಅಡವಿಹಳ್ಳಿ ತಿಳಿಸಿದ್ದಾರೆ.