ಕಾರಟಗಿ: ತಾಲೂಕಿನ ಜನರಿಗೆ ಕಾನೂನು ಸೇವೆಗಳು ಸಮಯ ಮತ್ತು ಹಣ ಎರಡು ವ್ಯರ್ಥವಿಲ್ಲದಂತೆ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಸಂಚಾರಿ ಪೀಠವಾಗಿದ್ದ ಕಾರಟಗಿ ನ್ಯಾಯಾಲಯವನ್ನು ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಮೇಲ್ದರ್ಜೆಗೆ ಏರಿಸಿದ್ದು, ಜು. 21ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಯಾಧೀಶರಾದ ಮೇಘಾ ಸೋಮಣ್ಣವರ ಹೇಳಿದರು.
ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ನಾಯಕ ಮಾತನಾಡಿ, ಇನ್ನು ಮುಂದೆ ಕಾರಟಗಿ ನ್ಯಾಯಾಲಯ ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲಿದೆ. ಪಟ್ಟಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಸ್ವಂತ ಕಟ್ಟಡಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಅನುದಾನ ಒದಗಿಸಿದ ಶಾಸಕ ಶಿವರಾಜ ತಂಗಡಗಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಸಿ. ಅವರ ಸತತ ಪ್ರಯತ್ನದಿಂದ ಈ ನ್ಯಾಯಾಲಯ ನಿರ್ಮಾಣ ಸಾಧ್ಯವಾಗಿದೆ ಎಂದರು.
ವಕೀಲ ಎಚ್.ಎಂ. ಮಂಜುನಾಥ್ ಮಾತನಾಡಿ, ಇಂದು ನಮ್ಮ ಬಹುದಿನದ ಕನಸು ನನಸಾಗಿದೆ ಎಂದರು. ನ್ಯಾಯಾಲಯ ಸ್ಥಾಪನೆ ನಿಟ್ಟಿನಲ್ಲಿ ನೆರವು ನೀಡಿದವರನ್ನು ಸ್ಮರಿಸಿದರು. ಸಂಘದ ಉಪಾಧ್ಯಕ್ಷ ಪ್ರಕಾಶ್ ಕುಸುಬಿ, ಹಿರಿಯ ವಕೀಲರಾದ ಸೋಮನಾಥ್ ಪಟ್ಟಣಶೆಟ್ಟಿ, ವಿ.ಎಸ್.ಎಚ್. ವಕೀಲರು ಮಾತನಾಡಿ, ಕಾರಟಗಿಗೆ ಪೂರ್ಣ ಪ್ರಮಾಣದ ನ್ಯಾಯಾಲಯ ವಿಧ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲು ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.ನ್ಯಾಯಾಲಯ ಸ್ಥಾಪನೆಗೆ ಶ್ರಮಿಸಿದ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷ, ಪದಾಧಿಕಾರಿಗಳಿಗೆ ಕಾರಟಗಿ ವಕೀಲರ ಪರವಾಗಿ ಗೌರವಿಸಲಾಯಿತು. ಸೋಮನಾಥ್ ಹೆಬ್ಬಡದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಬೂದಿ, ರಾಮಚಂದ್ರ ದೇವರಗುಡಿ ಕಾರ್ಯಕ್ರಮ ನಿರ್ವಹಿಸಿದರು.