ಕಾಯಂ ಲೋಕ ಆದಾಲತ್ ಕುರಿತಾದ ಜಾಗೃತಿ ಅಭಿಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಯಂ ಲೋಕ್ ಆದಾಲತ್ ಒಂದು ವಿಶೇಷ ನ್ಯಾಯಾಲಯ. ಪ್ರಕರಣಗಳಲ್ಲಿ ರಾಜೀ ಸಂಧಾನ ಪ್ರಕ್ರಿಯೆಯೇ ಈ ನ್ಯಾಯಾಲಯದ ಮೊದಲ ಆದ್ಯತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಹಕಾರಿ ಸಂಘ ಸಂಸ್ಥೆಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಲೀಡ್ ಬ್ಯಾಂಕ್ ಸಭಾಂಗಣ ದಲ್ಲಿ ನಡೆದ ಕಾಯಂ ಲೋಕ ಆದಾಲತ್ ಕುರಿತಾದ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾರ್ವಜನಿಕ ಉಪಯುಕ್ತ ಸೇವೆಗೆ ಸಂಬಂಧಿಸಿದಂತೆ ಇದೊಂದು ವಿಶೇಷ ವೇದಿಕೆ. ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಭೂ ಸಾರಿಗೆ, ಜಲಸಾರಿಗೆ, ವಾಯು ಸಾರಿಗೆ ಸೇವೆಗಳು, ಆಂಚೆ, ತಂತಿ, ದೂರವಾಣಿ ಸೇವೆಗಳು, ವಿದ್ಯುತ್, ನೀರು ಸರಬರಾಜು ಸಾರ್ವಜನಿಕ ನೈರ್ಮಲ್ಯ ಹಾಗೂ ಚರಂಡಿ ವ್ಯವಸ್ಥೆ, ವಿಮಾ ಸೇವೆ, ಆಸ್ಪತ್ರೆ ಹಾಗೂ ಔಷಧಾಲಯ ಸೇವೆ, ಹಣಕಾಸು ಸಂಸ್ಥೆ ಹಾಗೂ ಬ್ಯಾಂಕಿಂಗ್ ಸೇವೆ, ಶಿಕ್ಷಣ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಸೇವೆ, ಗೃಹ ಹಾಗೂ ರಿಯಲ್ ಎಸ್ಟೇಟ್ ಸೇವೆ ಒಳಗೊಂಡಂತೆ ಇತರ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಪ್ರಕರಣವನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಉಪಯುಕ್ತ ಸೇವೆಗಳ ಬಗ್ಗೆ 15 ರಿಂದ 20 ವರ್ಷಗಳ ಅನುಭವ ಹೊಂದಿದ ಇಬ್ಬರು ಸದಸ್ಯರು ನಾಮ ನಿರ್ದೇಶನಗೊಂಡವರು ಈ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಟಿ ಮೌಲ್ಯದ ವ್ಯಾಜ್ಯ ಅಥವಾ ಹಣಕಾಸು ವ್ಯವಹಾರದ ಅರ್ಜಿ ದಾಖಲಿಸಬಹುದು. ಇತರೆ ನ್ಯಾಯಾಲಯಗಳಂತೆ ಇಲ್ಲಿ ಶುಲ್ಕ ಕಟ್ಟುವ ಅಗತ್ಯವಿಲ್ಲ ಹಾಗೂ ಯಾವುದೇ ಆದಾಯದ ಮಿತಿ ಇಲ್ಲ. ಪ್ರಕರಣವನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಆದೇಶ ನೀಡಲಿದ್ದು, ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ಬೇರೆ ನ್ಯಾಯಾಲಯದಲ್ಲಿ ದಾವೆ ಇದ್ದು ಪ್ರಕರಣಗಳ ಕುರಿತು ಕಾಯಂ ಲೋಕ ಆದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ಉಭಯ ಪಕ್ಷಗಾರರು ರಾಜೀ ಸಂಧಾನಕ್ಕೆ ಒಪ್ಪದೇ ಇದ್ದಾಗ ವಿವಾದ ವಿಚಾರಣೆಗೆ ಒಳಪಡಿಸುವ ಅಧಿಕಾರ ಈ ನ್ಯಾಯಾಲಯಕ್ಕಿದ್ದು, ನಂತರ ತೀರ್ಪನ್ನು ಪ್ರಕಟಿಸಬಹುದು. ಅರ್ಜಿದಾರರಿಗೆ ಈ ತೀರ್ಪು ಸರಿ ಹೊಂದದೇ ಇದ್ದರೆ ಸಿವಿಲ್ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರಲ್ಲ. ಆದರೆ ನೇರವಾಗಿ ರಿಟ್ ಮೂಲಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಂತೋಷ್ ನಾರಾಯಣ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.