- ತೇಗೂರಿನ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಕಾಯಂ ಜನತಾ ನ್ಯಾಯಾಲಯ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ರಾಜಿ ಮತ್ತು ವಿಚಾರಣೆ ಮೂಲಕ ತೀರ್ಮಾನ ಮಾಡುವ ಅಧಿಕಾರ ಹೊಂದಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.
ನಗರ ಹೊರವಲಯದ ತೇಗೂರಿನ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1987 ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯನ್ನು 2002 ರಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ನಂತರ 2007 ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು, ಬೆಳಗಾವಿ, ಧಾರವಾಡ, ಕಲುಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಕಾಯಂ ಜನತಾ ನ್ಯಾಯಾಲಯ ಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದರು.ಪ್ರಯಾಣಿಕರನ್ನು ಅಥವಾ ಸರಕು ಸಾಗಿಸುವ ಭೂ ಸಾರಿಗೆ, ಜಲಸಾರಿಗೆ, ವಾಯು ಸಾರಿಗೆ ಸೇವೆಗಳು, ಅಂಚೆ ತಂತಿ, ದೂರ ವಾಣಿ ಸೇವೆಗಳು, ವಿದ್ಯುತ್, ಬೆಳಕು, ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳು, ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ, ಚರಂಡಿ ವ್ಯವಸ್ಥೆ, ವಿಮಾ ಸೇವೆಗಳು, ಆಸ್ಪತ್ರೆ ಅಥವಾ ಔಷಧಾಲಯಗಳ ಸೇವೆಗಳು, ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ಪ್ರಕರಣ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು, ಗೃಹ ಮತ್ತು ರಿಯಲ್ ಎಸ್ಟೇಟ್‌ಗಳಿಗೆ ಸಂಬಂಧಿಸಿದ ಸೇವೆಗಳು, ಎಲ್‌ಪಿಜಿ ಹೊಸ ಸಂಪರ್ಕದ ಪೂರೈಕೆ ಅಥವಾ ಮರು ಪೂರಣಗಳು ಇಲ್ಲವೆ ಅದಕ್ಕೆ ಸಂಬಂಧಿಸಿದ ಸೇವೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕ ಹಿತದೃಷ್ಟಿ ಯಿಂದ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಘೋಷಿಸಿರುವ ಇನ್ನಿತರ ಸೇವೆಗಳನ್ನು ಕಾಯಂ ಜನತಾ ನ್ಯಾಯಾಲಯ ಗಳಲ್ಲಿ ಇತ್ಯರ್ಥಪಡಿಸಬಹುದು ಎಂದು ಹೇಳಿದರು. ಖಾಯಂ ಜನತಾ ನ್ಯಾಯಾಲಯದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ಸಾರ್ವಜನಿಕ ಉಪಯುಕ್ತ ಸೇವೆಗಳ ಬಗ್ಗೆ 15 ರಿಂದ 20 ವರ್ಷಗಳ ಅನುಭವ ಹೊಂದಿರುವ ಇಬ್ಬರು ಸದಸ್ಯರು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದಂತೆ ಕಾರ್ಯ ನಿರ್ವಹಿಸುತ್ತಾರೆ. ಪ್ರಕರಣಗಳನ್ನು ದಾಖಲಿಸಲು ನೇರವಾಗಿ ಅಥವಾ ವಕೀಲರ ಮೂಲಕ ದಾಖಲಿ ಸಲು ಅವಕಾಶವಿದ್ದು, ಯಾವುದೇ ಆದಾಯ ಮಿತಿ, ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಆದರೆ ದಾಖಲಿಸುವ ಪ್ರಕರಣಗಳ ಬಗ್ಗೆ ಬೇರೆ ನ್ಯಾಯಾಲಯಗಳಲ್ಲಿ ದಾಖಲಿಸಿರಬಾರದು. ವಿವಾದದಲ್ಲಿ ಒಂದು ವೇಳೆ ಉಭಯ ಪಕ್ಷಗಾರರು ಒಪ್ಪದೇ ಇದ್ದರೆ ವಿವಾದವನ್ನು ವಿಚಾರಣೆ ನಡೆಸಿ ಕಾನೂನು ಆಧಾರದ ಮೇಲೆ ತ್ವರಿತವಾಗಿ ಐತೀರ್ಪು ನೀಡಲಾಗುತ್ತದೆ ಎಂದರು. ಕಾಯಂ ಜನತಾ ನ್ಯಾಯಾಲಯದಲ್ಲಿ ನೀಡಿದ ಐತೀರ್ಪನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿಲ್ಲ. ಆದರೆ, ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಮಾತ್ರ ಐತೀರ್ಪನ್ನು ಪ್ರಶ್ನಿಸ ಬಹುದು. ಖಾಯಂ ಜನತಾ ನ್ಯಾಯಾಲಯ ನೀಡಿದ ಐತೀರ್ಪನ್ನು ಸ್ಥಾನಿಕ ಅಧಿಕಾರ ವ್ಯಾಪ್ತಿ ಹೊಂದಿದ ಸಿವಿಲ್ ನ್ಯಾಯಾಲಯ ತಮ್ಮ ನ್ಯಾಯಾಲಯವೇ ಮಾಡಿದ ಡಿಕ್ರಿ ಎಂದು ಪರಿಗಣಿಸಿ ಜಾರಿ ಮಾಡುವ ಅಧಿಕಾರ ಹೊಂದಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಜಯಶೀಲಾ, ಸರ್ವೋದಯ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದರಾಮು, ಕಾಲೇಜಿನ ಪ್ರಾಂಶುಪಾಲ ಜೆ.ಸಂತೋಷ್ ಪಾಲ್ಗೊಂಡಿದ್ದರು. 14 ಕೆಸಿಕೆಎಂ 4
ಚಿಕ್ಕಮಗಳೂರಿನ ಹೊರವಲಯದ ತೇಗೂರಿನ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಉದ್ಘಾಟಿಸಿದರು.