ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಅಗತ್ಯ: ಖಾದರ್

KannadaprabhaNewsNetwork |  
Published : Aug 08, 2026, 02:45 AM IST
ಕಾಪು ಸಮುದ್ರ ಕೊರೆತ ಪ್ರದೇಶದಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ಸಚಿವರು | Kannada Prabha

ಸಾರಾಂಶ

ಕಂದಾಯ ಸಚಿವರಾಗಿದ್ದ ಕೃಷ್ಣ ಭೈರೇಗೌಡ ಅವರು ಕಡಲ್ಕೊರತೆ ತಡೆಗೆ ಚೆನ್ನೈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿದ್ದಾರೆ. ಅದಿನ್ನೂ ಮಂಜೂರಾಗಿಲ್ಲ, ಕರಾವಳಿಯ ಕಡಲ್ಕೊರೆತಕ್ಕೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಬೇಕಾಗಿದೆ ಎಂದು ರಾಜ್ಯ ಆರೋಗ್ಯ-ಕುಟುಂಬ ಕಲ್ಯಾಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಕಾಪು: ಕಂದಾಯ ಸಚಿವರಾಗಿದ್ದ ಕೃಷ್ಣ ಭೈರೇಗೌಡ ಅವರು ಕಡಲ್ಕೊರತೆ ತಡೆಗೆ ಚೆನ್ನೈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿದ್ದಾರೆ. ಅದಿನ್ನೂ ಮಂಜೂರಾಗಿಲ್ಲ, ಕರಾವಳಿಯ ಕಡಲ್ಕೊರೆತಕ್ಕೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಬೇಕಾಗಿದೆ ಎಂದು ರಾಜ್ಯ ಆರೋಗ್ಯ-ಕುಟುಂಬ ಕಲ್ಯಾಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಲೈಟ್‌ ಹೌಸ್ ಪರಿಸರದಲ್ಲಿ ಸಂಭವಿಸಿರುವ ಕಡಲ್ಕೊರೆತ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಥಳೀಯ ಶಾಸಕರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಕಡಲ್ಕೊರತಕ್ಕೆ ತಾತ್ಕಾಲಿಕ ಕಾಮಗಾರಿ ನಡೆಸಿದರೆ ಅದರ ಬಿಲ್ ಮಂಜೂರು ಮಾಡುವುದಕ್ಕೆ ಬೆಂಗಳೂರಿನಲ್ಲಿ ಟೆಂಡರ್ ಆಗಿದೆಯಾ, ಗುತ್ತಿಗೆದಾರರು ಯಾರು, ಅನುಮತಿ ಯಾರು ಕೊಟ್ಟದ್ದು, ಅನುಮತಿ ಇಲ್ಲದೆ ಯಾಕೆ ಮಾಡಿದ್ರಿ ಅಂತೆಲ್ಲ ನೂರು ತಕರಾರು ಮಾಡುತ್ತಾರೆ. ಆದ್ದರಿಂದ ಕಡಲ್ಕೊರೆತ ಪ್ರದೇಶವನ್ನು ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಅದನ್ನು ಪ್ರಕೃತಿ ವಿಕೋಪ ನಿರ್ವಹಣೆ ಇಲಾಖೆಯಿಂದ ಮಂಜೂರು ಮಾಡಿ ಕಾಮಗಾರಿ ಮಾಡಬೇಕು. ತಕ್ಷಣಕ್ಕೆ ಅದರ ಲಾಭ ಸಿಗುವುದಿಲ್ಲ. ಈ ವರ್ಷ ಕಾಮಗಾರಿ ನಡೆಸಿದರೆ ಮುಂದಿನ ವರ್ಷ ಕಡಲ್ಕೊರೆತ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಆರೋಗ್ಯ ಅವರವರ ಕೈಯಲ್ಲಿದೆ: ಬೆಂಗಳೂರಿನಲ್ಲಿ ಸ್ಟಾರ್ ಹೊಟೇಲ್‌ಗಳಿಗೆ ಆಹಾರ ಸುರಕ್ಷಾ ಪ್ರಾಧಿಕಾರದ ಅಧಿಕಾರಿಗಳ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರತಿಯೊಬ್ಬರ ಆರೋಗ್ಯ ಅವರ ಕೈಯಲ್ಲಿಯೇ ಇರುತ್ತದೆ. ನನ್ನ ಕೈಯಲ್ಲಿ ಇಲ್ಲ. ನಾನು ಕಾಯಿಲೆ ಬಂದಾಗ ಮದ್ದು ಕೊಡುವ ಇಲಾಖೆಯ ಸಚಿವ. ಆದರೆ ಕಾಯಿಲೆ ಬರದಂತೆ ತಡೆಯುವುದಕ್ಕಾಗಿ ಜನರು ಸೇವಿಸುವ ಆಹಾರದ ಗುಣಮಟ್ಟ ಪರಿಶೀಲಿಸುತಿದ್ದೇವೆ ಎಂದರು.ಈ ಕ್ರಮವನ್ನು ಮೇಲಿನಿಂದಲೇ ಆರಂಭಿಸುತಿದ್ದೇವೆ. ಸಣ್ಣ ಗೂಡಂಗಡಿಗಳ ಮೇಲೆ ದಾಳಿ ಮಾಡಿ ಪ್ರಯೋಜನ ಇಲ್ಲ. ಇವರು ಸ್ಟಾರ್ ಹೊಟೇಲ್‌ಗಳನ್ನೇ ಬಿಟ್ಟಿಲ್ಲ, ಇನ್ನು ನಮ್ಮನ್ನು ಬಿಡುತ್ತಾರಾ ಎಂದು ಚಿಕ್ಕ ಹೊಟೇಲಿನವರು ತಂತಾನೇ ಸರಿ ದಾರಿಗೆ ಬರುತ್ತಾರೆ. ಜನರಿಗೆ ಸುರಕ್ಷಿತಾ ಆಹಾರ ನೀಡುವುದೇ ನಮ್ಮ ಉದ್ದೇಶ ಎಂದರು.

ಒಳ್ಳೆ ಊಟ, ನಿದ್ದೆ ಮಾಡಿ:

ಜನರು ಒಳ್ಳೆಯ ಊಟ ಮಾಡಿ, ಒಳ್ಳೆಯ ನಿದ್ದೆ ಮಾಡಿ, ಆರೋಗ್ಯವಾಗಿರಿ. ನಮ್ಮ ಆಸ್ಪತ್ರೆಗೆ ಬರಲೇಬೇಡಿ ಎಂದು ಸಲಹೆ ಮಾಡಿದ ಅವರು, ನೂರು ಬೆಡ್ಡಿನ ಆಸ್ಪತ್ರೆ ಮಾಡುವುದು ದೊಡ್ಡದಲ್ಲ, ಅಲ್ಲಿ 30 ಬೆಡ್ಡು ಭರ್ತಿ ಆಗುವುದಿಲ್ಲ, ಅದಕ್ಕಿಂತ ಇರುವ ಆಸ್ಪತ್ರೆಗೆ ಒಳ್ಳೆಯ ಸೌಲಭ್ಯ ನೀಡುವುದು ತಮ್ಮ ಉದ್ದೇಶ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಹುರಾಷ್ಟ್ರೀಯ ಕಂಪನಿಗಳು ತಾವು ಮಾರುವ ಚಿಕನ್ ಇತ್ಯಾದಿ ಮಾಂಸಾಹಾರದ ಬಗ್ಗೆ ಜನರಿಗೆ ಸತ್ಯ ಹೇಳಲಿ, ಅದಕ್ಕೆ ಯಾವ ಬಣ್ಣ ಬಳಸುತ್ತಾರೆ, ಆ ಮಾಂಸಕ್ಕೆ ಎಷ್ಟು ದಿನ ಆಯ್ತು, ದೇಶದ್ದಾ ವಿದೇಶದ್ದಾ, ಫ್ರೀಝರ್‌ನಲ್ಲಿಟ್ಟದ್ದಾ, ಯಾವ ಮಸಾಲೆ ಹಾಕುತ್ತಾರೆ ಎಂದು ಜನರಿಗೆ ಗೊತ್ತಾಬೇಕಲ್ಲ. ಆದ್ದರಿಂದ ಅದನ್ನೂ ಪರಿಶೀಲನೆ ಮಾಡುತ್ತೇವೆ ಎಂದು ಮುನ್ಸೂಚನೆ ನೀಡಿದರು.

ಮೀನುಗಾರರ ಅನುಭವ ಶಾಶ್ವತ: ಕಡಲ್ಕೊರತೆ ತಡೆಯುವುದಕ್ಕೆ ಯಾವ ತಂತ್ರಜ್ಞಾನದಿಂದಲೂ ಆಗುತ್ತಿಲ್ಲ. ಇಲ್ಲಿನ ಮೀನುಗಾರರು ಹೇಳುವ ಉಪಾಯವೇ ಶಾಶ್ವತ ಎಂದು ಯು.ಟಿ. ಖಾದರ್ ಹೇಳಿದರು. ಕಡಲ್ಕೊರೆತ ವೀಕ್ಷಣೆ ಸಂದರ್ಭದಲ್ಲಿ ಶಾಸಕ ಸುರೇಶ್‌ ಶೆಟ್ಟಿ ಅವರು ತಂತ್ರಜ್ಞಾನ ಬಳಕೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಖಾದರ್, 1989ರಲ್ಲಿ ಈ ಭಾಗದಲ್ಲಿ ಕಡಲ್ಕೊರೆತ ಆರಂಭವಾಯಿತು. ಆಗ ಸರ್ಕಾರ 15 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಮಾಡಿತ್ತು. ಅದೂ ನೀರಲ್ಲಿ ಹೊಯಿತು, ನಂತರ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ತಂದು ಹಾಕಿದ್ರು, ಅವೂ ಮುಳುಗಿದವು, ನಂತರ ಇಂಜಿನಿಯರ್‌ಗಳು ಬಾಕ್ಸ್ ಟೆಕ್ನಾಲಜಿ ಮಾಡಿದ್ರು, ಅದೂ ಹೋಯಿತು, ನಂತರ ಸ್ಯಾಂಡ್ ಬ್ಯಾಗ್ ಹಾಕಿದ್ರು, ಅವು ಎಲ್ಲಿ ಹೋಗಿವೆ ಅಂತಲೇ ಗೊತ್ತಿಲ್ಲ. ಈಗ ಬೇರೆನೋ ಟೆಕ್ನಾಲಜಿ ಹೇಳ್ತಿದ್ದಾರೆ, ಯಾವ ಟೆಕ್ನಾಲಜಿ ಮಾಡಿದ್ರೂ ಉಪಯೋಗ ಇಲ್ಲ, ಇಲ್ಲಿನ ಮೀನುಗಾರರನ್ನು ಕೇಳ‍ಬೇಕು, ಅವರ ಅನುಭವದ ಪ್ರಕಾರ ಮಾಡಿದ್ರೆ ಶಾಶ್ವತವಾಗಿ ಕಡಲ್ಕೊರೆತ ನಿಲ್ಲಿಸಬಹುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಸಿ, ಎಸ್‌ಟಿ ಮೀಸಲು ಮಸೂದೆ ೯ನೇ ಶೆಡ್ಯೂಲ್‌ಗೆ ಸೇರಿಸಿ: ಉಗ್ರಪ್ಪ
ಸಚಿವ ಸ್ಥಾನ ಭರವಸೆ ಈಡೇರಿಸದ ಕಾಂಗ್ರೆಸ್‌: ಸುರೇಶ್ ಆರೋಪ