ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯ: ಸಂಕೇತ್ ಪೂವಯ್ಯ

KannadaprabhaNewsNetwork |  
Published : Sep 01, 2024, 01:55 AM IST
ಚಿತ್ರ : 31ಎಂಡಿಕೆ3 : ವಿಶ್ವ ಆನೆ ದಿನದಂದು ಶಿಬಿರದ ಆನೆಗಳಿಗೆ  ಸಂಕೇತ್ ಪೂವಯ್ಯ ವಿವಿಧ ಹಣ್ಣುಗಳನ್ನು ತಿನ್ನಿಸಿದರು. | Kannada Prabha

ಸಾರಾಂಶ

ಆನೆ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತವಾದ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಅಗತ್ಯವಿದೆ ಎಂದು ಸಂಕೇತ್‌ ಪೂವಯ್ಯ ಹೇಳಿದರು. ಹಾರಂಗಿಯ ಸಾಕಾನೆ ಶಿಬಿರದಲ್ಲಿ ವಿಶ್ವ ಆನೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಆನೆ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತವಾದ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಅಗತ್ಯವಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹೇಳಿದರು.

ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗದಿಂದ ಹಾರಂಗಿಯ ಸಾಕಾನೆ ಶಿಬಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಶ್ವ ಆನೆ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆನೆ ಮಾನವ ಸಂಘರ್ಷದಲ್ಲಿ ಮನುಷ್ಯ ಹಾಗೂ ಆನೆಗಳ ಸಾವು ನಿರಂತರವಾಗಿ ನಡೆಯುತ್ತಲೇ ಇದೆ.

ಇಲಾಖೆಯ ಮಾಹಿತಿಯ ಪ್ರಕಾರ ಕಳೆದ ವರ್ಷಗಳಲ್ಲಿ 283 ಆನೆಗಳು ಸಹಜವಾದ ಸಾವನ್ನಪ್ಪಿವೆ.

30 ಆನೆಗಳು ವಿದ್ಯುತ್ ಪ್ರವಹಿಸಿ ಸಾವಪ್ಪಿದರೆ, 6 ಆನೆಗಳು ಹತ್ಯೆಗೊಳಗಾಗಿವೆ. ಆದ್ದರಿಂದ ಅಮಾಯಕ ಆನೆಗಳ ಸಂರಕ್ಷಣೆಗೆ ವೈಜ್ಞಾನಿಕವಾದ ಕ್ರಮವಾಗಬೇಕಿದೆ ಎಂದು ಸಂಕೇತ್ ಪೂವಯ್ಯ ಹೇಳಿದರು.

ಕಾಡಾನೆಗಳ ರಕ್ಷಣೆ ಕೇವಲ ಇಲಾಖೆ ಅಥವಾ ಸರ್ಕಾರದ್ದಲ್ಲ. ಇಲ್ಲಿ ಕಾಡಂಚಿನ ಜನರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ತುರ್ತು ಅಗತ್ಯವಿದೆ ಎಂದು ಹೇಳಿದ ಸಂಕೇತ್ ಪೂವಯ್ಯ, ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ನಿಯಂತ್ರಣ ಹಾಗೂ ಸೂಕ್ತ ನಿರ್ವಹಣೆಗೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಮಂತ್ರಿಗಳು ಹಾಗೂ ಅರಣ್ಯ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸುವ ಮೂಲಕ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಪೊನ್ನಣ್ಣ ನವರು ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಂಕೇತ್ ಪೂವಯ್ಯ ಹೇಳಿದರು.

ದುಬಾರೆ ಆನೆ ಶಿಬಿರದ ಪಶುವೈದ್ಯ ಡಾ.ಚೆಟ್ಟಿಯಪ್ಪ ಆನೆಗಳ ಕುಟುಂಬದ ಮಾದರಿ ಹಾಗೂ ಆವಾಸಸ್ಥಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ಆನೆಗಳ ಬಗೆಗಿನ ವಿದ್ಯಾರ್ಥಿಗಳ ಕೆಲವು ಕೌತುಕ ಪ್ರಶ್ನೆಗಳಿಗೆ ಮಾಹಿತಿ ನೀಡಿದರು.

ಮಡಿಕೇರಿ ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾತನಾಡಿದರು. ಕೊಡಗು ಆನೆ ಕಾರ್ಯಪಡೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಅನುಷಾ, ವಿರಾಜಪೇಟೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಯ್ಯದ್ ಅಹಮದ್ ಶಾ ಹುಸೇನ್, ಮಡಿಕೇರಿ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಅರಣ್ಯಾಧಿಕಾರಿ ಎನ್.ಸಿ.ಶಮನ್,‌ ಮರಿಸ್ವಾಮಿ, ವಲಯ ಅರಣ್ಯಾಧಿಕಾರಿಗಳಾದ ರತನ್ ಕುಮಾರ್, ಕೊಟ್ರೇಶ್, ಅರವಿಂದ್, ರವೀಂದ್ರ ಸೇರಿದಂತೆ ಉಪವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಇದ್ದರು.

ಆನೆ ದಿನದ ಅಂಗವಾಗಿ ಶಿಬಿರದ ಸಾಕಾನೆಗಳಾದ ಲಕ್ಷ್ಮಣ, ಈಶ್ವರ, ಏಕದಂತ, ವಿಕ್ರಮ, ರಾಮ ಹಾಗೂ ಕರ್ಣ ಎಂಬ ಆನೆಗಳಿಗೆ ಸ್ನಾನ ಮಾಡಿಸಿ ಹರಳೆಣ್ಣೆ ಹಚ್ಚಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಆನೆಗಳ ಮಾವುತರಾದ ಪುಟ್ಟ, ವಿಶ್ವನಾಥ, ನಾಗರಾಜ, ಸಂಜು, ಮಂಜ ಹಾಗೂ ಮಂಜು ಅಲಂಕೃತ ಸಾಕಾನೆಗಳನ್ನು ಏರಿ ಕಾರ್ಯಕ್ರಮದ ಅತಿಥಿಗಳಿಗೆ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದುದು ಕಂಡು ಬಂತು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದ ಶಾಲೆಯ ಮುಖ್ಯ ಶಿಕ್ಷಕರೂ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕ್ರತ ಟಿ.ಜಿ.ಪ್ರೇಮಕುಮಾರ್ ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕುರಿತಾದ ಜಾಗೃತಿ ಮೂಡಿಸುವ ಫಲಕಗಳೊಂದಿಗೆ ಘೋಷಣೆ ಕೂಗಿದರು.

ಇದೇ ವೇಳೆ ಸಾಕಾನೆಗಳಿಗೆ ಅತಿಥಿಗಳು ಹಾಗೂ ಅಧಿಕಾರಿಗಳು ವಿವಿಧ ಹಣ್ಣುಗಳನ್ನು ತಿನ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ ಸವಾರನಿಗೆ ಸಹಾಯ ಮಾಡಿ ₹1000 ದಂಡ ತೆತ್ತ ಕಾರು ಚಾಲಕ!
ಪೋಷಕರ ವಿರೋಧದ ನಡುವೆ ಪೊಲೀಸ್‌ ಭದ್ರತೆಯಲ್ಲಿ ಪ್ರೇಮಿಗಳ ವಿವಾಹ!