ಶೀಘ್ರ ಶಾಶ್ವತ ಜಲ ಆಯೋಗ ರಚನೆ: ಡಿಕೆಶಿ

KannadaprabhaNewsNetwork |  
Published : Nov 03, 2025, 01:45 AM IST

ಸಾರಾಂಶ

ಕೇಂದ್ರ ಜಲ ಆಯೋಗದ ಮಾದರಿಯಲ್ಲೇ ರಾಜ್ಯದಲ್ಲೂ ಶೀಘ್ರ ಶಾಶ್ವತ ರಾಜ್ಯ ಜಲ ಆಯೋಗವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಜಲ ಆಯೋಗದ ಮಾದರಿಯಲ್ಲೇ ರಾಜ್ಯದಲ್ಲೂ ಶೀಘ್ರ ಶಾಶ್ವತ ರಾಜ್ಯ ಜಲ ಆಯೋಗವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಜಲ ಆಯೋಗವು ವಿವಿಧ ಜಲ ವಿವಾದಗಳು ಸೇರಿ ಒಟ್ಟಾರೆ ರಾಜ್ಯದ ಜಲ ಭದ್ರತೆ ಕುರಿತು ಸರ್ಕಾರಕ್ಕೆ ಕಾಲ-ಕಾಲಕ್ಕೆ ಶಿಫಾರಸು ಮಾಡಲಿದೆ. ಈ ಮೂಲಕ ಜಲ ವಿವಾದಗಳ ಇತ್ಯರ್ಥಕ್ಕೆ ಸಂಬಂಧಿಸಿ ಸಲಹೆ ನೀಡುವ ಜತೆಗೆ ನೀರಿನ ಬೇಡಿಕೆ ಮತ್ತು ಲಭ್ಯತೆ, ರೈತರು ಸೇರಿ ಪ್ರತಿಯೊಬ್ಬರಿಗೂ ನೀರಿನ ಬಳಕೆಗೆ ಹೊಣೆಗಾರಿಕೆ ನಿಗದಿಪಡಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ನ.5 ರಂದು ಬಿಡುಗಡೆಯಾಗಲಿರುವ ತಮ್ಮ ‘ನೀರಿನ ಹೆಜ್ಜೆ’ ಎಂಬ ಪುಸಕ್ತದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ರಾಜ್ಯದ ಪ್ರಸ್ತುತ ನೀರಾವರಿ ಪದ್ಧತಿ ಮತ್ತು ಅದರಲ್ಲಿ ಆಗಬೇಕಾದ ಬದಲಾವಣೆಗಳು, ಬೆಳೆಗಳ ಪದ್ಧತಿ, ಪ್ರವಾಹ ಮತ್ತು ಬರಲಾದಂತಹ ವಿಪತ್ತು ಸಂದರ್ಭದಲ್ಲಿ ನೀರಿನ ನಿರ್ವಹಣೆ ಯಾವ ರೀತಿ ಇರಬೇಕು, ತುರ್ತು ಕ್ರಮಗಳು ಏನು ಎಂಬ ಬಗ್ಗೆ ಶಾಶ್ವತ ಜಲ ಆಯೋಗ ಅಧ್ಯಯನ ನಡೆಸಿ ಶಿಫಾರಸು ಮಾಡಲಿದೆ ಎಂದು ಹೇಳಿದರು.

ಆಯೋಗ ಅಸ್ತಿತ್ವಕ್ಕೆ ಬರಬೇಕಾದರೆ, ಕಾಯ್ದೆ ಅಗತ್ಯವಾಗಿ ಆಗಬೇಕಾಗುತ್ತದೆ. ಇದನ್ನು ಮುಂಬರುವ ದಿನಗಳಲ್ಲಿ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಲಾಗುವುದು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬರುವುದು ಅನುಮಾನ ಎಂದು ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಈ ಆಯೋಗ 10 ರಿಂದ 15 ಪರಿಣಿತರ ತಂಡ ಒಳಗೊಂಡಿರಲಿದೆ. ಸಮಗ್ರ ಮತ್ತು ತಾಂತ್ರಿಕ ಅಧ್ಯಯನಕ್ಕಾಗಿ ನೀರಾವರಿ, ಆರ್ಥಿಕ ಇಲಾಖೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಹಿರಿಯ ಅಧಿಕಾರಿಗಳು, ಪರಿಸರ ತಜ್ಞರು, ಜಲವಿಜ್ಞಾನಿಗಳು, ಪ್ರಗತಿಪರ ರೈತರು, ನೀರು ಪೂರೈಕೆ ವಿಭಾಗದ ಪರಿಣಿತರು ಇರಲಿದ್ದಾರೆ. ರಾಜ್ಯದ ಜಲ ಭದ್ರತೆ ಖಚಿತಪಡಿಸಲು ಮತ್ತು ಮುಂದಿನ ಪೀಳಿಗೆಗೆ ನೀರಿನ ಸಂಪನ್ಮೂಲ ವರ್ಗಾಯಿಸಲು ಇದು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮಾಹಿತಿ ನೀಡಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ