ಹುಬ್ಬಳ್ಳಿ:
ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಗಜಾನನ ಮಹಾಮಂಡಳಿ, ಶ್ರೀರಾಮಸೇನಾ, ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಭವಾನಿ ಆರ್ಕೆಡ್, ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಶ್ರೀರಾಮ ಕಾಂಪ್ಲೆಕ್ಸ್ ಸಂಘಗಳು ಮನವಿ ಸಲ್ಲಿಸಿವೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕರು, ಅದೇ ಸಮಿತಿಗೆ ಏಕೆ? ಬೇರೆ ಸಮಿತಿಗೆ ಪರವಾನಗಿ ನೀಡಲು ಒತ್ತಾಯಿಸಿದರು. ಸಾಕಷ್ಟು ನಿರ್ಬಂಧನೆಗಳು ಇರುವ ಕಾರಣಕ್ಕೆ ಹಿಂದಿನ ಸಮಿತಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಆಗ ಮೇಯರ್ ಅವರು ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ (ಭವಾನಿ ಆರ್ಕೆಡ್)ಗೆ ಪರವಾನಗಿ ನೀಡಿ ಆದೇಶಿಸಿದರು.
ಭಾರತ್ ಜೋಡೋಗೆ ಪಾಲಿಕೆಯ ಅನುದಾನ ಬೇಡಭಾರತ ಜೋಡೋ ಯುವ ಸಂಘಗಳ ಸ್ಥಾಪನೆ ಹಾಗೂ ಮಹಾನಗರ ಪಾಲಿಕೆಯಿಂದ ಇದಕ್ಕೆ ಅನುದಾನ ಒದಗಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆದವು. ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಪಾಲಿಕೆ ಉಪ ಆಯುಕ್ತೆ ಅನುರಾಧಾ ವಸ್ತ್ರದ, ಪ್ರತಿ ಗ್ರಾಪಂಗೆ 1, ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪನೆಗೆ ಸರ್ಕಾರ ಆದೇಶಿಸಿದೆ. ಅದರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಒಂದು ಸಂಘ ಸ್ಥಾಪಿಸಲು ಸೂಚಿಸಿದ್ದು, ಪ್ರತಿ ಸಂಘದಲ್ಲಿ ಪ್ರತಿ ಸಂಘದಲ್ಲಿ 16-35 ವರ್ಷದೊಳಗಿನ ಯವಕ, ಯುವತಿಯರು 100 ಅಥವಾ ಮೇಲ್ಪಟ್ಟು ಇರಬೇಕೆಂಬ ನಿಯಮವಿದೆ. ಪ್ರತಿ ಸಂಘದಲ್ಲಿ 15 ಜನರನ್ನೊಳಗೊಂಡ ಕಾರ್ಯಕಾರಿಣಿ ಸಮಿತಿ ಇರಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಸಂಘಗಳಿಗೆ ನೀಡುವ ಅನುದಾನವನ್ನು ಪಾಲಿಕೆ ಪಾವತಿಸಲು ಸರ್ಕಾರ ಸೂಚಿಸಿದೆ ಎಂದು ತಿಳಿಸಿದರು. ಇದನ್ನು ಪ್ರಶ್ನಿಸಿದ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಗ್ರಾಪಂ, ನಗರ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿ ಸಂಘಗಳಿಗೆ ಯಾರು ಅನುದಾನ ನೀಡುತ್ತಿದ್ದಾರೆಂಬುದನ್ನು ಸಭೆಗೆ ತಿಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಪಾಲಿಕೆ ಮಾರ್ಗಸೂಚಿಗಳನ್ನು ತಮಗೆ ತಿಳಿಸಲಾಗಿದೆ. ಉಳಿದಂತೆ ಮಾಹಿತಿ ಇಲ್ಲ ಎಂದರು. ಅದು ಹೇಗೆ ಸಾಧ್ಯ? ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾವು ಇದ್ದೀರಿ? ಈ ಬಗ್ಗೆ ತಮಗೇ ಗೊತ್ತಿಲ್ಲ ಎನ್ನುವುದು ಎಷ್ಟು ಸರಿ ಎಂದರು. ಈ ಬಗ್ಗೆ ಸ್ಪಷ್ಟತೆ ನೀಡಬೇಕು. ಯಾವುದೇ ಕಾರಣಕ್ಕೂ ಸಂಘಕ್ಕೆ ಪಾಲಿಕೆಯಿಂದ ಅನುದಾನ ನೀಡಬಾರದು ಎಂದು ಆಗ್ರಹಿಸಿದರು. ಈ ವೇಳೆ ಉಭಯ ಪಕ್ಷಗಳ ನಡುವೆ ವಾಕ್ಸಮರ ಉಂಟಾಯಿತಲ್ಲದೇ, ಸದನದ ಬಾವಿಗಿಳಿದು ಪ್ರತಿಭಟನೆ ಕೂಡ ನಡೆಸಿದರು. ಆಗ ಮೇಯರ್ ಸಭೆಯನ್ನು ಮುಂದೂಡಿದರು.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ಪಾಲಿಕೆಯಿಂದ ಗೌರವಧನ ವಿತರಿಸುತ್ತಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಮೇಯರ್ ಅವರಿಗೆ ಕೇವಲ ₹ 25 ಸಾವಿರ ಗೌರವಧನ ನೀಡಲಾಗುತ್ತಿದೆ. ಆದರೆ, ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ₹ 40 ಸಾವಿರ ಗೌರವಧನ ವಿತರಿಸಲಾಗುತ್ತಿದೆ. ಅದು ಕೂಡ ಪಾಲಿಕೆಯಿಂದ ಇದನ್ನು ಸಭೆಯಲ್ಲಿ ಚರ್ಚಿಸದೇ, ನೀಡುತ್ತಿರುವುದು ಏಕೆ? ಎಂದು ಪಾಲಿಕೆ ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಇದು ಸರ್ಕಾರದ ಆದೇಶದನ್ವಯ ಗೌರವಧನ ವಿತರಿಸಲಾಗುತ್ತಿದೆ ಎಂದರು. ಈ ವೇಳೆ ಮಾತನಾಡಿ, ಪಾಲಿಕೆ ಬಿಜೆಪಿ ಮಹಿಳಾ ಸದಸ್ಯೆ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಸಮಿತಿಗೆ ಪಾಲಿಕೆಯಿಂದ ಏಕೆ ಗೌರವಧನ ನೀಡಬೇಕು ಎಂದು ಪ್ರಶ್ನಿಸಿದರು. ಇದರಿಂದ ಸಭೆಯಲ್ಲಿ ಗೊಂದಲ ವಾತಾವರಣ ಉಂಟಾಯಿತು.
ನಿಮ್ಮೊಂದಿಗೆ ನಾವಿದ್ದೇವೆ. ಸರ್ಕಾರದ ಮಟ್ಟದಲ್ಲಿ ಪಾಲಿಕೆಯ ಏನೇ ಕೆಲಸಗಳು ಆಗುವುದಿದ್ದರೂ ಬನ್ನಿ ಎಲ್ಲರೂ ಸೇರಿ ನಗರವನ್ನು ಅಭಿವೃದ್ಧಿ ಪಡಿಸೋಣ ಎಂದು ವಿಧಾನ ಪರಿಷತ್ ಎಫ್.ಎಚ್. ಜಕ್ಕಪ್ಪನವರ ಹೇಳಿದರು. ಇದಕ್ಕೆ ಪರಿಷತ್‌ನ ಇನ್ನೊಬ್ಬ ಸದಸ್ಯ ಲಿಂಗರಾಜ ಪಾಟೀಲ, ತಾವೂ ಸಹ ಕೈ ಜೋಡಿಸುವುದಾಗಿ ಭರವಸೆ ನೀಡಿದರು.ಇಬ್ಬರು ವಿಧಾನ ಪರಿಷತ್ ಸದಸ್ಯರಾದ ಬಳಿಕ ಮೊದಲ ಬಾರಿಗೆ ಪಾಲಿಕೆ ಸಾಮಾನ್ಯಸಭೆಗೆ ಹಾಜರಾಗಿದ್ದರು. ಈ ವೇಳೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಜಕ್ಕಪ್ಪನವರ, ಹುಬ್ಬಳ್ಳಿ-ಧಾರವಾಡದಲ್ಲಿ ಉದ್ಯಾನವನಗಳ ನಿರ್ವಹಣೆ ಸರಿಯಿಲ್ಲ. ನಗರವನ್ನು ಇನ್ನಷ್ಟು ಸುಂದರವನ್ನಾಗಿ ಮಾಡಬೇಕಿದೆ. ಪಾಲಿಕೆ ಸಂಬಂಧಪಟ್ಟಂತೆ ಪೆಂಡಿಂಗ್ ಫೈಲ್ಸ್ ಇದ್ದರೆ ತಿಳಿಸಿ. ನಾನು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಬಗೆಹರಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಜತೆಗೆ ಪಾಲಿಕೆ ಸಾಮಾನ್ಯಸಭೆಯ ಪ್ರಾರಂಭದಲ್ಲಿ ಸಂವಿಧಾನ ಪೀಠಿಕೆ ಓದಿಸುವ ಪ್ರವೃತ್ತಿ ಬೆಳೆಯಬೇಕು ಎಂದು ಸಲಹೆ ಮಾಡಿದರು. ಬಳಿಕ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ. ಇಲ್ಲಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಕ್ಕಪ್ಪನವರ ಇದೀಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರೊಂದಿಗೆ ತಾವೂ ಕೈ ಜೋಡಿಸುವ ಮೂಲಕ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.