ಮೂಡಲಪಾಯ ಯಕ್ಷಗಾನ ಡಿಪ್ಲೊಮಾ ಕೋರ್ಸ್‌ಗೆ ಅನುಮತಿ: ಪ್ರೊ.ಜೆಪಿ

KannadaprabhaNewsNetwork | Published : Jan 10, 2025 12:49 AM

ಸಾರಾಂಶ

ಕಲಿಕಾ ಕೇಂದ್ರದ ಶೈಕ್ಷಣಿಕ ತರಬೇತಿ ಅವಧಿ 10 ತಿಂಗಳಾಗಿದೆ. ಕಲಿಕಾರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ. ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿಯಾಗಿದ್ದು, ಪ್ರತಿ ಶನಿವಾರ ಮಧ್ಯಾಹ್ನ 2 ರಿಂದ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ತರಗತಿಗಳು. ಕಲಿಕಾರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತಿನ ಸಹಯೋಗದೊಂದಿಗೆ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಪ್ರದರ್ಶಕ ವಿಶ್ವ ವಿದ್ಯಾಲಯದಿಂದ ಒಂದು ವರ್ಷದ ಮೂಡಲಪಾಯ ಯಕ್ಷಗಾನ ಡಿಪ್ಲೊಮಾ ಕಲಿಕಾ ತರಗತಿಗಳನ್ನು ಆರಂಭಿಸಲು ಕರ್ನಾಟಕ ಸಂಘಕ್ಕೆ ಅಧಿಕೃತ ಅನುಮತಿ ದೊರಕಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಿಕಾ ಕೇಂದ್ರದ ಶೈಕ್ಷಣಿಕ ತರಬೇತಿ ಅವಧಿ 10 ತಿಂಗಳಾಗಿದೆ. ಕಲಿಕಾರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ. ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿಯಾಗಿದ್ದು, ಪ್ರತಿ ಶನಿವಾರ ಮಧ್ಯಾಹ್ನ 2 ರಿಂದ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ತರಗತಿಗಳು. ಕಲಿಕಾರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಡಿಪ್ಲೊಮಾ ಕೋರ್ಸ್‌ನ ವಾರ್ಷಿಕ ಶುಲ್ಕ 2 ಸಾವಿರ ರು.ಗಳು, ಸಮರ್ಥ ಮತ್ತು ಅನುಭವಿ ಅಧ್ಯಾಪಕರಿಂದ ತರಗತಿಗಳನ್ನು ನಡೆಸಲಾಗುವುದು. ಪಾರಂಪರಿಕ ಭಾಗವತರಿಂದ ಹಿರಿಯ ಕಲಾವಿದರಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.

ರಾಜ್ಯದ ವಿವಿಧ ಜಾನಪದ ಪ್ರದರ್ಶಕ ಕಲೆಗಳ ಪರಿಚಯದ ಜೊತೆಗೆ ರಾಷ್ಟ್ರದ ಮುಖ್ಯ ಜಾನಪದ ಪ್ರದರ್ಶಕ ಕಲೆಗಳ ಬಗ್ಗೆ ತಿಳಿವಳಿಕೆ, ಕಲಿಕಾರ್ಥಿಗಳಿಗೆ ಕ್ಷೇತ್ರ ಕಾರ್ಯ, ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಒಂದು ಪೂರ್ಣ ಪ್ರಮಾಣದ ಪ್ರಸಂಗ ಪ್ರದರ್ಶನ ನೀಡಲಾಗುವುದು ಎಂದು ವಿವರಿಸಿದರು.

ಮುಖವರ್ಣಿಕೆ, ವೇಷಭೂಷಣ, ಕುಣಿತ ಮುಂತಾದ ತಾಂತ್ರಿಕ ವಿಷಯಗಳ ಸಿದ್ಧತೆಯಲ್ಲಿ ತರಬೇತಿ ನಿಡಲಾಗುವುದು. ವಾರ್ಷಿಕ ಪರೀಕ್ಷೆ ನಂತರ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ನೀಡಲಾಗುವುದು. ಅರ್ಜಿಗಳನ್ನು ಕರ್ನಾಟಕ ಸಂಘದ ಕಚೇರಿಯಿಂದ ನೇರವಾಗಿ ಅಥವಾ ಅಂಚೆ ಮೂಲಕ ಪಡೆಯಬಹುದು. ಅರ್ಜಿ ನಮೂನೆಯನ್ನು ನಿಗದಿಪಡಿಸಿದ 25 ರು. ಶುಲ್ಕ ಪಾವತಿಸಿ ಪಡೆಯಬಹುದು ಎಂದರು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು 2025, ಜ.25 ಕೊನೆ ದಿನವಾಗಿದೆ. ಸಂದರ್ಶನದ ಮೂಲಕ ಕಲಿಕಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಫೆಬ್ರವರಿ 8 ರಿಂದ ತರಗತಿಗಳು ಆರಂಭವಾಗಲಿವೆ. ಸಿಲಬಸ್ ಕೂಡ ಸಿದ್ಧಪಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರಮೋದ್ ಶಿಗ್ಗಾಂವ್, ಶಶಿಧರ್ ಭಾರಿಘಾಟ್ ಇದ್ದರು.

Share this article