ಕನಕಗಿರಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ಪ್ರತಿಷ್ಠಾಪಿಸುವ ಸಮಿತಿಯವರು ಸರ್ಕಾರದ ನಿಯಮದಂತೆ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಪಿಐ ವೀರಣ್ಣ ಹಳ್ಳಿ ಸೂಚಿಸಿದರು.
ತಹಸೀಲ್ದಾರ್ ಚಂದ್ರಶೇಖರ ಗಾಳಿ ಹಾಗೂ ಪಪಂ ಪ್ರಭಾರಿ ಮುಖ್ಯಾಧಿಕಾರಿ ರಾಜಶೇಖರ ಮಾತನಾಡಿ, ಸಣ್ಣ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೊಂಡದಪೇಟೆಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೂ ಬೃಹತ್ ಗಾತ್ರದ ವಿಘ್ನೇಶನ ಮೂರ್ತಿಗಳ ವಿಸರ್ಜನೆಗೆ ಕೆ. ಕಾಟಾಪುರ ಅಥವಾ ಲಕ್ಷ್ಮೀದೇವಿ ಕೆರೆಯಲ್ಲಿ ವಿಸರ್ಜಿಸಲು ವ್ಯವಸ್ಥೆ ಮಾಡಲಾಗುವುದು. ನಗರದ ಬೀದಿಗಳಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆ ಮಾಡಲಾಗುವುದು ಎಂದರು.
ಹಿಂದೂ ಜಾಗರಣ ವೇದಿಕೆಯ ಅಯ್ಯನಗೌಡ ಮಾತನಾಡಿ, ಭೀಕರ ಬರದಲ್ಲಿ ಸಾವಿರಾರು ರು. ನೀಡಿ ಗಣಪತಿ ಪ್ರತಿಷ್ಠಾಪಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರವಾನಗಿ ಪಡೆಯುವುದನ್ನು ರದ್ದುಗೊಳಿಸಿ, ಉಚಿತ ಅನುಮತಿ ನೀಡಬೇಕು. ಜೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ನೀಡುವ ಬದಲು ಶೂನ್ಯ ಬಿಲ್ ನೀಡಬೇಕು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಗಣಪತಿ ವಿಸರ್ಜನೆ ಸೂಕ್ತ ಜಾಗ ಗುರುತಿಸಬೇಕು. ಮೆರವಣಿಗೆ ದಿನಗಳಲ್ಲಿ ಮದ್ಯದಂಗಡಿಗಳ ಬಂದ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಹನುಮಂತರೆಡ್ಡಿ, ದೊಡ್ಡಬಸವ ಸಾನಬಾಳ, ವೆಂಕಟೇಶ ಗಂಗಾಮತ, ಹನುಮೇಶ ಡಿಶ್ ಮಾತನಾಡಿದರು.
ದಂಡ ಹಾಕಲಾಗುವುದು: ಸರ್ಕಾರದ ನಿಯಮದಂತೆ ಹಣ ಪಾವತಿಸಿ ವಿದ್ಯುತ್ ಪರವಾನಗಿ ಪಡೆದುಕೊಳ್ಳಬೇಕು. ಹಣ ನೀಡದ ಸಮಿತಿಯವರಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಒಂದು ವೇಳೆ ಇಲಾಖೆಯ ಇಲಾಖೆ ಅನುಮತಿ ಇಲ್ಲದೆ ವಿದ್ಯುತ್ ಸಂಪರ್ಕ ಪಡೆದುಕೊಂಡಲ್ಲಿ ಸಮಿತಿ ಮೇಲೆ ಕೇಸ್ ದಾಖಲಿಸಿ ದಂಡ ಹಾಕಲಾಗುವುದು ಎಂದು ಕನಕಗಿರಿ ಜೆಇ ಆನಂದ ಪ್ರಭಾರಿ ಹೇಳಿದರು.