ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಆಯೋಜಿಸುವವರು ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಮೆರವಣಿಗೆ ಸಾಗುವ ಮಾರ್ಗ ಹಾಗೂ ಕಾರ್ಯಕ್ರಮದ ವಿವರ ನೀಡಬೇಕು. ಪೊಲೀಸ್ ಇಲಾಖೆ ನಿಗದಿಪಡಿಸುವ ಮಾರ್ಗ ಹಾಗೂ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಕಾನೂನು ನಿಯಮ ಪಾಲಿಸಿ ನಗರ ಹಾಗೂ ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮುಖಂಡರೊಂದಿಗೆ ಸೌಹಾರ್ದ ಸಭೆ ನಡೆಸಿ ಮಾತನಾಡಿದ ಅವರು, ಗಣೇಶ ಪ್ರತಿಷ್ಠಾನ ನಂತರ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮಂಟಪ ಸ್ಥಾಪಿಸಲು ಸಂಬಂಧಪಟ್ಟ ಇಲಾಖೆಗಳ ಅಗತ್ಯ ಅನುಮತಿ ಹಾಗೂ ಎನ್‌ಒಸಿ ಪಡೆದುಕೊಳ್ಳಬೇಕು. ಸ್ಥಳದ ಮಾಲೀಕರು, ಜೊತೆಗೆ ಪೊಲೀಸ್ ಇಲಾಖೆಯಿಂದಲೂ ಕಡ್ಡಾಯವಾಗಿ ಅನುಮತಿ ಅಗತ್ಯ ಎಂದರು.
ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಆಯೋಜಿಸುವವರು ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಮೆರವಣಿಗೆ ಸಾಗುವ ಮಾರ್ಗ ಹಾಗೂ ಕಾರ್ಯಕ್ರಮದ ವಿವರ ನೀಡಬೇಕು. ಪೊಲೀಸ್ ಇಲಾಖೆ ನಿಗದಿಪಡಿಸುವ ಮಾರ್ಗ ಹಾಗೂ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಗಣೇಶೋತ್ಸವದಲ್ಲಿ ಧ್ವನಿವರ್ಧಕ ಹಾಗೂ ಡಿಜೆ ಬಳಕೆಯಲ್ಲಿಯೂ ಸರ್ಕಾರ ನಿಗದಿಪಡಿಸಿರುವ ಶಬ್ಧಮಿತಿ ಕಡ್ಡಾಯ. ಅತಿಯಾದ ಶಬ್ಧದಿಂದ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಗಣೇಶ ಪ್ರತಿಷ್ಠಾಪನೆ ವೇಳೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಬೆಂಕಿ, ಯಾವುದೇ ಅವಘಡ ಸಂಭವಿಸಿದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಯಾವುದೇ ಗಲಭೆ ಪ್ರಕರಣದಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಕಠಿಣ ಕ್ರಮವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಗಲಭೆ ಪ್ರಕರಣದಲ್ಲಿ ಭಾಗಿಯಾದರೆ ಅಂತಹವರ ಪಾಸ್ ಪೋರ್ಟ್, ಸರ್ಕಾರಿ ನೌಕರಿಗೆ ಕುತ್ತು ಬೀಳಲಿದೆ. ಅಲ್ಲದೇ, ಮೆರವಣಿಗೆ ವೇಳೆ ಜಿಲ್ಲಾದ್ಯಂತ ಪೋಲೀಸ್ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುವಂತೆ ಕಿವಿಮಾತು ಹೇಳಿದರು.
ಕಳೆದ ವರ್ಷ ನಡೆದಂತೆ ಗಲಭೆಗೆ ಅವಕಾಶ ನೀಡಬಾರದು. ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಶಾಂತಿ ಸೌಹಾರ್ದತೆಯಿಂದ ಜನರು ಬದುಕು ನಡೆಸುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಲ್ಲಿ ನಾಗಮಂಗಲ ಮತ್ತು ಮದ್ದೂರು ತಾಲೂಕುಗಳಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಉಂಟಾದ ಗಲಭೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐಗಳಾದ ನವೀನ್, ನಾರಾಯಣಿ, ಅನಿಲ್ ಕುಮಾರ್, ಚೆಸ್ಕಾಂ ಇಇ ಶಿವಕುಮಾರ್ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.