
ಕನ್ನಡಪ್ರಭ ವಾರ್ತೆ ಅಂಕೋಲಾ
ಸಗಡಗೇರಿ ಗ್ರಾಪಂ ವ್ಯಾಪ್ತಿಯ ದೇವಿಗದ್ದೆಯಲ್ಲಿ ಕಳೆದ 4 ವರ್ಷಗಳಿಂದ ಕಟ್ಟಡ ಕಲ್ಲು ಗಣಿಗಾರಿಗೆ ನಡೆಯುತ್ತಿತ್ತು. ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಆಗುವ ಭಾರಿ ಸ್ಪೋಟಕದಿಂದ ಇಲ್ಲಿನ ಮನೆಗಳಿಗೆ ಹಾನಿಯಾಗಿತ್ತು. ಜೊತೆಗೆ ಜಾನವಾರುಗಳು ಸಹ ಸಾವು ಕಂಡಿದ್ದವು. ಈ ಹಿನ್ನೆಲೆ ಕಳೆದ ವರ್ಷ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು.
ಕಳೆದ 2 ತಿಂಗಳಿಂದ ಮತ್ತೆ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಗಣಿಗಾರಿಕೆ ಮಾಡಿ ತಂದ ಕಲ್ಲುಗಳನ್ಬು ಅರಣ್ಯ ಇಲಾಖೆಯ ಪ್ಲಾಂಟೇಷನ ಪ್ರದೇಶದಿಂದ ಅಕ್ರಮವಾಗಿ ರಸ್ತೆ ನಿರ್ಮಿಸಿ ಸಾಗಾಟ ನಡೆಸಿದ್ದರು.
ಈ ಹಿನ್ನೆಲೆ ಅರಣ್ಯ ರಸ್ತೆಯಿಂದ ಗಣಿಗಾರಿಕೆಯ ವಾಹನ ಸಾಗಾಟ ಮಾಡಲು ಅವಕಾಶ ನೀಡದಿರಲು ಎಸಿಎಫ್ ಜಯೇಶ ಹಾಗೂ ಆರ್.ಎಫ್.ಓ.ದೀಪಕ ನಾಯ್ಕ ಅವರಲ್ಲಿ ಗ್ರಾಮಸ್ಥರು ಒತ್ತಾಯ ಮಾಡಿ ಮನವಿ ಸಲ್ಲಿಸಿದ್ದರು.ಆದರೆ ಅರಣ್ಯ ಇಲಾಖೆಯಿಂದ ಮಾತ್ರ ಯಾವುದೇ ಕ್ರಮವಾಗಿರಲಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಹಾಗೂ ಅರಣ್ಯ ಸಚಿವರಲ್ಲಿ ತಮ್ಮ ದೂರನ್ನು ಸಲ್ಲಿಸಿದ್ದರು.
ಈ ಬಗ್ಗೆ ಪರಿಶೀಲನೆಗೆ ಸ್ಥಳಕ್ಕಾಗಮಿಸಿದ ಡಿಸಿಎಫ್ ರವಿಶಂಕರ ಅವರನ್ನು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.ಅರಣ್ಯ ಇಲಾಖೆಯ ಪ್ರದೇಶದಲ್ಲಿ ರಸ್ತೆ ಮಾಡಿ ಗಣಿಗಾರಿಕೆಯ ನಡೆಸಲು ಅವಕಾಶ ಮಾಡಿಕೊಟ್ಟು ಪ್ರೋತ್ಸಾಹ ನೀಡುತ್ತಿರುವುದು ಖಂಡನೀಯ. ರಾಜಾರೋಷವಾಗಿ 40-50 ಟನ್ ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದರು ಕೈಕಟ್ಟಿ ಕುಳಿತಿರುವ ಹಿಂದಿನ ಒಳ ಮರ್ಮ ನಮಗೆ ಅರ್ಥವಾಗಿದೆ. ಬದುಕಲು ಸಣ್ಣ ಪುಟ್ಟ ಅರಣ್ಯ ಅತಿಕ್ರಮಣ ಮಾಡಿದರೆ ದರ್ಪದಿಂದ ತೆರವುಗೊಳಿಸುವ ಅರಣ್ಯ ಇಲಾಖೆಯವರು, ಗಣಿಗಾರಿಕೆಗೆ ಮಾತ್ರ ತಮ್ಮದೇ ಜಾಗ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಡಿಸಿಎಫ್ ರವಿ ಶಂಕರ ಮಾತನಾಡಿ, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸುತ್ತೇನೆ. ಸದ್ಯ ಈ ರಸ್ತೆಯನ್ನು ಬಂದ್ ಮಾಡಿ ಗಣಿಗಾರಿಕೆಯ ಕಲ್ಲು ಸಾಗಾಟ ತಡೆಯುತ್ತೇನೆ ಎಂದರು.ಸಗಡಗೇರಿ ಗ್ರಾಪಂ ಸದಸ್ಯ ಗುರು ಗೌಡ, ವೆಂಕಟೇಷ ಗೌಡ, ವಿನಯ ಗೌಡ, ಹರೀಶ ಗೌಡ, ಪ್ರದೀಪ ಗೌಡ, ಮಹಾಬಲೇಶ್ವರ ಗೌಡ, ಸುರೇಶ ಗೌಡ, ರಾಮಾ ಗೌಡ, ಬಲಿಯಮ್ಮಾ ಗೌಡ, ಸೀತಾ ಗೌಡ, ಮಾದೇವಿ ಗೌಡ, ತಾರಾ ಗೌಡ, ಭಾರತಿ ಗೌಡ, ದುರ್ಗಪ್ಪ ಗೌಡ ಸೇರಿದಂತೆ ಮೊದಲಾದವರಿದ್ದರು.