ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶಕ್ಕೆ ಸಿದ್ಧವಾಗುತ್ತಿದೆ ಪೆರ್ಣಂಕಿಲ ಕ್ಷೇತ್ರ

KannadaprabhaNewsNetwork |  
Published : Feb 13, 2024, 12:45 AM IST
ಪ್ರೆಸ್ ಮೀಟ್ | Kannada Prabha

ಸಾರಾಂಶ

ಭಕ್ತರ ಸಹಕಾರದಲ್ಲಿ 10 ಕೋಟಿ ರು. ವೆಚ್ಚದಲ್ಲಿ ದೇವಳಗಳ ಜೀರ್ಣೋದ್ಧಾರ, 5 ಕೋಟಿ ರು. ವೆಚ್ಚದಲ್ಲಿ ಪೇಜಾವರ ಶಾಖಾ ಮಠದ ಪುನರ್ನಿರ್ಮಾಣ ಮತ್ತು 5 ಕೋಟಿ ರು. ವೆಚ್ಚದಲ್ಲಿ ಸಭಾಂಗಣ ಮತ್ತು ಭೋಜನಾಲಯ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಹಿರಿಯಡ್ಕಇಲ್ಲಿನ ಪೆರ್ಣಂಕಿಲ ಗ್ರಾಮದಲ್ಲಿ ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ ಸುಮಾರು 1500 ವರ್ಷಗಳ ಐತಿಹ್ಯವಿರುವ ಶ್ರೀ ಮಹಾಲಿಂಗೇಶ್ವರ-ಶ್ರೀ ಮಹಾಗಣಪತಿ ದೇವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮಾ.17ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭವಾಗಿ ಏ.2ರ ಜಾತ್ರೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.ಈ ಬಗ್ಗೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಶಾ ನಾಯಕ್ ಪೆರ್ಣಂಕಿಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಲವು ಸಮಯದ ಆಶಯದಂತೆ, ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಕ್ಷೇತ್ರವನ್ನು ಜೀರ್ಣೋದ್ಧಾರದ ಸಂಕಲ್ಪ ಮಾಡಿದ್ದಾರೆ. ಭಕ್ತರ ಸಹಕಾರದಲ್ಲಿ 10 ಕೋಟಿ ರು. ವೆಚ್ಚದಲ್ಲಿ ದೇವಳಗಳ ಜೀರ್ಣೋದ್ಧಾರ, 5 ಕೋಟಿ ರು. ವೆಚ್ಚದಲ್ಲಿ ಪೇಜಾವರ ಶಾಖಾ ಮಠದ ಪುನರ್ನಿರ್ಮಾಣ ಮತ್ತು 5 ಕೋಟಿ ರು. ವೆಚ್ಚದಲ್ಲಿ ಸಭಾಂಗಣ ಮತ್ತು ಭೋಜನಾಲಯ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಕೊನೆಯ ಹಂತದಲ್ಲಿವೆ. ಮುಂದೆ ಶ್ರೀಗಳು ಗುರುಕುಲ ಮತ್ತು ಗೋಶಾಲೆಗಳ ನಿರ್ಮಾಣದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದರು.ತೀರಾ ಗ್ರಾಮೀಣ ಭಾಗದಲ್ಲಿ ಇಷ್ಟೆಲ್ಲಾ ಯೋಜನೆಗಳಿಗೆ ದಾನಿಗಳನ್ನು ಹುಡುಕಿಕೊಂಡು ಹೋಗದೇ ಅವರೇ ಕ್ಷೇತ್ರಕ್ಕೆ ಬಂದು ದೇಣಿಗೆ ಸಮರ್ಪಿಸುತ್ತಿರುವ ಕ್ಷೇತ್ರದ ಪಾವಿತ್ರ್ಯತೆ, ಶಕ್ತಿಯನ್ನು ಸೂಚಿಸುತ್ತಿದೆ ಎಂದವರು ಸಂತಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ತಂತ್ರಿಗಳಾದ ಮಧುಸೂಧನ ತಂತ್ರಿ ಹಾಗೂ ವಾಸ್ತುಶಾಸ್ತ್ರಜ್ಞರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪಸ್ಥಿತರಿದ್ದರು.ಪೆರ್ಣನ ಅಂಕಿಲದಿಂದ ಉದ್ಭವವಾದ ಗಣಪತಿಹಚ್ಚಹಸಿರಿನ ಪ್ರಕೃತಿ ಮಧ್ಯೆ ಇರುವ ಕ್ಷೇತ್ರದಲ್ಲಿ ಶಿವವನ್ನು ಪುರಾಣಕಾಲದಲ್ಲಿ ಖರಾಸುರನು ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ನಂತರ ಇಲ್ಲಿಯೇ ಸಮೀಪದಲ್ಲಿ ಪೆರ್ಣ ಎಂಬ ರೈತ ಗದ್ದೆ ಉಳುತ್ತಿದ್ದಾಗ ಆತನ ಅಂಕಿಲ (ನೆಗಿಲ ಮೊನೆ)ಕ್ಕೆ ಸಿಕ್ಕಿ ಗಣಪತಿ ವಿಗ್ರಹ ಉದ್ಭವವಾಯಿತು ಎಂದು ಐತಿಹ್ಯವಿದೆ. ಇಲ್ಲಿನ ಶಿಲಾಶಾಸನದಲ್ಲಿ ಬಾರ್ಕೂರಿನ ಅಳುಪರ ರಾಣಿ ಬಲ್ಲಮಹಾದೇವಿಯು ಈ ಶಿಲಾಮಯ ಗುಡಿಗಳ ನಿರ್ಮಾಣಕ್ಕೆ ಧನಸಹಾಯ ಮಾಡಿದ ಇತಿಹಾಸವಿದೆ. ಕಾಲಕ್ರಮೇಣ ಕ್ಷೇತ್ರದ ಆಡಳಿತವು ಪೇಜಾವರ ಮಠಕ್ಕೊಳಪಟ್ಟಿದೆ. 1989ರಲ್ಲೊಮ್ಮೆ ಬ್ರಹ್ಮಕಲಶೋತ್ಸವ ನಡೆದಿದ್ದು, ಈಗ ಸಂಪೂರ್ಣ ಜೀರ್ಣೋದ್ಧಾರದೊಂದಿಗೆ ಮತ್ತೇ ಬ್ರಹ್ಮಕಲಶೋತ್ಸವಕ್ಕೆ ಸಿದ್ದವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ