ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ

KannadaprabhaNewsNetwork | Published : Nov 23, 2024 12:30 AM

ಸಾರಾಂಶ

ಈ ಬಗ್ಗೆ ಟೀಕೆ ಟಿಪ್ಪಣಿಗಳು ಬಂದರೂ ಅದರ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಎಲ್ಲವನ್ನೂ ಸ್ವೀಕರಿಸುತ್ತೇನೆ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದಷ್ಟೇ ನಮ್ಮ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿ ನೀಡಿ ಕೆಲಸ ಮಾಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಕಂಡೂ ರಾಜ್ಯದ ಸಂಸದರು, ವಿಪಕ್ಷ ನಾಯಕರು ಪ್ರಶ್ನಿಸದಿರುವುದು ವಿಪರ್ಯಾಸದ ಸಂಗತಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದರು.

ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅತಿವೃಷ್ಟಿಗೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ದಾಖಲೆ ಸಹಿತ ವರದಿ ಸಲ್ಲಿಸಿ ಮನವಿ ಮಾಡಲಾಯಿತು. ಹೈಪವರ್ ಕಮಿಟಿ ಸಭೆ ನಡೆಸಿದ ಕೇಂದ್ರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಆ ಸಮಯದಲ್ಲಿ ಅನಿವಾರ್ಯವಾಗಿ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಂತರ ನ್ಯಾಯಾಲಯದ ನಿರ್ದೇಶನದಂತೆ 3450 ಕೋಟಿ ರು. ಪರಿಹಾರ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಯಾವುದೇ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿಸಲು ಅವಕಾಶ ನೀಡಲಿಲ್ಲ. ಇದು ಎನ್‌ಡಿಎ ನಾಯಕರಿಗೆ ಅರ್ಥವಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರಿಂದ ಜನಪರ ಯೋಜನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2013-18 ರಲ್ಲಿ ಕೈಗೆತ್ತಿಕೊಂಡಿದ್ದ ಬೆಂಗಳೂರು ಮಹಾನಗರದ 50 ಲಕ್ಷ ಮಂದಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಪೂರ್ಣಗೊಳಿಸಲು ವಿಫಲವಾದ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳ ನಿರ್ಲಕ್ಷತೆಯನ್ನು ಗಮನಿಸಿ, 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವೇ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿರುವುದು ನಮ್ಮ ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.

ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ 5 ಗ್ಯಾರಂಟಿಗಳ ಅನುಷ್ಠಾನ, ಎತ್ತಿನಹೊಳೆ ಯೋಜನೆ ಜಾರಿ, ಭದ್ರಾ ಡ್ಯಾಂ ಗೇಟ್‌ಗಳ ದುರಸ್ತಿಗೆ ತುರ್ತು ಕ್ರಮ ವಹಿಸಿ ರೈತರ ಬಗ್ಗೆ ಕಾಳಜಿ ತೋರಿರುವುದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಕಾರ್ಯದಕ್ಷತೆಯಾಗಿದೆ ಎಂದು ತಿಳಿಸಿದರು.

ಸಮ್ಮೇಳನ ಯಶಸ್ವಿಗೆ ಮನವಿ: ಮಂಡ್ಯದಲ್ಲಿ ನಡೆಸಲುದ್ದೇಶಿಸಿರುವ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ತೋರ್ಪಡಿಸದೆ ರಾಜ್ಯದಲ್ಲೇ ಇತಿಹಾಸ ಸೃಷ್ಟಿಸುವ ಸಮ್ಮೇಳನ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮ್ಮೇಳನದಲ್ಲಿ ನಾನು ಸಚಿವನಾಗಿ ಭಾಗವಹಿಸುತ್ತಿಲ್ಲ. ಕನ್ನಡಾಭಿಮಾನಿಯಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಸಮ್ಮೇಳನ ಹಾಗೂ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ಬಗ್ಗೆ ಟೀಕೆ ಟಿಪ್ಪಣಿಗಳು ಬಂದರೂ ಅದರ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಎಲ್ಲವನ್ನೂ ಸ್ವೀಕರಿಸುತ್ತೇನೆ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದಷ್ಟೇ ನಮ್ಮ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿ ನೀಡಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಶಾಸಕ ರವಿಕುಮಾರ್ ಗಣಿಗ, ರಮೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ವಿವೇಕಾನಂದ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ನಗರಸಭೆ ಅಧ್ಯಕ್ಷ ಪ್ರಕಾಶ್, ಡಾ ಅಧ್ಯಕ್ಷ ನಹೀಂ ಇತರರಿದ್ದರು.

Share this article