ದಾಬಸ್‍ಪೇಟೆ: ವ್ಯಕ್ತಿಯೊಬ್ಬ ಹೊಂಗೆಮರಕ್ಕೆ ಟವಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಅಚಿಂತ್ ಮಂಡಲ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ಈತ ಟಿ.ಬೇಗೂರು ಸಮೀಪದ ಹುರುಳೇನಹಳ್ಳಿ ಫ್ಯಾಕ್ಟರಿವೊಂದರ ಗೋದಾಮಿನಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದನು. ಕಳೆದೆರಡು ತಿಂಗಳ ಹಿಂದೆಯಷ್ಟೆ ಊರಿನಿಂದ ಕೆಲಸಕ್ಕೆ ಬಂದಿದ್ದ ಅಚಿಂತ್, ಕಳೆರಡು ದಿನಗಳ ಹಿಂದೆ ಫ್ಯಾಕ್ಟರಿ ಕಡೆಯಿಂದ ಸಂಬಳ ಬಂದಿದ್ದು, ಸಂಬಳ ಪಡೆದ ಎರಡು ದಿನ ಕೆಲಸಕ್ಕೆ ಹೋಗದೇ 2 ದಿನಗಳಿಂದ ನಿರಂತರ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಮದ್ಯದ ನಶೆಯಲ್ಲಿ ನೇಣು ಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.