ಸಿಡಿಲು ಬಡಿದು ವ್ಯಕ್ತಿ ಸಾವು: ₹5 ಲಕ್ಷ ಪರಿಹಾರ ವಿತರಣೆ

KannadaprabhaNewsNetwork | Updated : Apr 19 2024, 10:31 AM IST

ಸಾರಾಂಶ

ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಿಡಿಲಿನ ಅಬ್ಬರದ ಮಳೆಯಾಗಿದ್ದು, ತಾಲೂಕಿನ ಜೂಲಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತರೊಬ್ಬರು ಮೃತರಾಗಿದ್ದಾರೆ.

 ಕುಷ್ಟಗಿ :  ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಿಡಿಲಿನ ಅಬ್ಬರದ ಮಳೆಯಾಗಿದ್ದು, ತಾಲೂಕಿನ ಜೂಲಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತರೊಬ್ಬರು ಮೃತರಾಗಿದ್ದಾರೆ.

ಸಿದ್ದಯ್ಯ ಗುರುವಿನ (32) ಮೃತರು. ತಾಲೂಕಿನ ಕೊರಡಕೇರಾ ಗ್ರಾಮದ ನಿವಾಸಿಯಾಗಿದ್ದು, ಜೂಲಕಟ್ಟಿ ಗ್ರಾಮದ ಹೊಲದಲ್ಲಿ ಕೃಷಿ ಕಾರ್ಯ ಮಾಡಲು ಹೋಗಿದ್ದು, ಗುರುವಾರ ಮಧ್ಯಾಹ್ನ ಸಿಡಿಲು, ಗುಡುಗು ಸಮೇತ ಮಳೆಯಾದ ಹಿನ್ನೆಲೆ ಸಿಡಿಲಿನ ಬಡಿತಕ್ಕೆ ಬಲಿಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸ್‌ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಹಾರ ಚೆಕ್ ವಿತರಣೆ: ಕುಷ್ಟಗಿಯ ತಹಸೀಲ್ದಾರ ರವಿ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ₹5ಲಕ್ಷದ ಪರಿಹಾರದ ಚೆಕ್‌ನ್ನು ವಿತರಣೆ ಮಾಡಿದರು.

ಸಿಡಿಲಿನ ಬಡಿತಕ್ಕೆ ಎರಡು ಎಮ್ಮೆ ಸಾವು:

ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಸಿಡಿಲಿನ ಬಡಿತಕ್ಕೆ ಎರಡು ಎಮ್ಮೆಗಳು ಸಾವನ್ನಪ್ಪಿವೆ.ಮೃತಪಟ್ಟ ಎರಡು ಎಮ್ಮೆಗಳು ಬಳೂಟಗಿ ಗ್ರಾಮದ ನಿವಾಸಿ ಮುರ್ತುಜಾ ಸಾಬ್ ಕಾಸಿಂಸಾಬ್ ನದಾಫ ಎಂಬವರಿಗೆ ಸೇರಿದವು. ಗುರುವಾರ ಮಧ್ಯಾಹ್ನದ ಸಮಯದಲ್ಲಿ ಏಕಾಏಕಿಯಾಗಿ ಗುಡುಗು ಸಮೇತ ಮಳೆಯಾದ ಹಿನ್ನೆಲೆ ಸಿಡಿಲಿನ ಬಡಿತಕ್ಕೆ ಮೃತಪಟ್ಟಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಎರಡು ಎಮ್ಮೆಗಳು ಅವರ ಜೀವನೋಪಾಯಕ್ಕೆ ಆಸರೆಯಾಗಿದ್ದವು ಎನ್ನಲಾಗಿದೆ.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:

ಕೊಪ್ಪಳ ತಾಲೂಕಿನ ಬೆಳೂರು ಮತ್ತು ಡೊಂಬರಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರಗಳು ಹೊತ್ತಿ ಉರಿದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಬೆಳೂರು ಗ್ರಾಮದಲ್ಲಿ ಪಂಪಣ್ಣ ಸಿಗನಳ್ಳಿ ಅವರ ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿಯಲಾರಂಭಿಸಿತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಅರ್ಧಗಂಟೆಗೂ ಹೆಚ್ಚು ಕಾಲ ಉರಿಯಿತು.ಇದಾದ ಕೆಲವೇ ಹೊತ್ತಿನ ನಂತರ ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿಯೂ ಬಸಮ್ಮ ಮಂಡಲಗೇರಿ ಅವರ ಮನೆಯ ಮುಂದೆ ಇರುವ ತೆಂಗಿನ ಮರಕ್ಕೂ ಸಿಡಿಲು ಬಡಿದು ಹೊತ್ತಿ ಉರಿಯಿತು.

ಮಳೆಯ ಅಷ್ಟಾಗಿ ಇಲ್ಲವಾದರೂ ಕೇವಲ ಗುಡುಗು, ಸಿಡಿಲು ಜೋರಾಗಿ ಇತ್ತ. ಕೊಪ್ಪಳ ತಾಲೂಕಿನಲ್ಲಿ ಕೆಲವೆಡೆ ಅಲ್ಪಪ್ರಮಾಣದ ಮಳೆಯಾಗಿದೆ.ಕುಕನೂರು ಹಾಗೂ ಗಂಗಾವತಿಯಲ್ಲಿಯೂ ಸಾಧಾರಣ ಮಳೆಯಾಗಿದೆ.

Share this article