ನೋಟಿಸ್ ನೀಡಿದ ಮತದಾರರ ಖುದ್ದು ಹಾಜರಿ ಕಡ್ಡಾಯ: ಜಿಲ್ಲಾಧಿಕಾರಿ

KannadaprabhaNewsNetwork |  
Published : Aug 25, 2026, 02:30 AM IST
ಸಭೆ ನಡೆಸಿದರು  | Kannada Prabha

ಸಾರಾಂಶ

ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಮ್ಯಾಪಿಂಗ್ ಆಗದಿರುವ ಮತದಾರರು ಮತ್ತು ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ಹಾಗೂ ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯ.

ಒಟ್ಟೂ 12,30,037 ಮತದಾರರು, 11,23,022 ಮ್ಯಾಪಿಂಗ್, 1,07,015 ಸ್ಥಳಾಂತರ, ದ್ವಿಪ್ರತಿ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಮ್ಯಾಪಿಂಗ್ ಆಗದಿರುವ ಮತದಾರರು ಮತ್ತು ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ಹಾಗೂ ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ, ಜಿಲ್ಲೆಯ ರಾಜಕೀಯ ಪಕ್ಷಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ 12,30,037 ರಲ್ಲಿ 11,23,022 ಮಂದಿಯ ಮ್ಯಾಪಿಂಗ್ ಮುಗಿದಿದ್ದು, ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿಯ ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1,07,015 ಮಂದಿಯನ್ನು ಗುರುತಿಸಲಾಗಿದ್ದು, ಇದರಲ್ಲಿ 65,330 ಮಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಮತದಾರರು ಖುದ್ದು ಹಾಜರಾಗುವ ಬಗ್ಗೆ ಬಿ.ಎಲ್.ಓಗಳ ಮೂಲಕ ನೋಟಿಸ್ ನೀಡಲಾಗುವುದು. ನೋಟಿಸ್ ತಲುಪಿದ ಮತದಾರರು ಖುದ್ದಾಗಿ ವಿಚಾರಣಾ ದಿನಾಂಕದಂದು ನೋಟಿಸಲ್ಲಿ ನಮೂದಿಸಲಾದ ದಿನಾಂಕ/ಸ್ಥಳದಲ್ಲಿ ಸಮಯಕ್ಕೆ ವಿಚಾರಣೆಗೆ ಹಾಜರಾಗಿ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕಾಗಿರುತ್ತದೆ. ವಿಚಾರಣೆಗೆ ಹಾಜರಾಗದ ಮತದಾರರಿಗೆ ಪುನಃ ಇನ್ನೊಂದು ದಿನಾಂಕ ನಿಗದಿಪಡಿಸಿ ದಾಖಲೆಗಳೊಂದಿಗೆ ಹಾಜರಾಗಲು ಅವಕಾಶ ನೀಡಲಾಗುವುದು. ಗರಿಷ್ಠ 2 ವಿಚಾರಣಾ ದಿನಾಂಕ ನೀಡಲು ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಿದರು.

ಸೆ. 23ರವರೆಗಿನ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ 1-10-2026 ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿದ್ದು, ನಮೂನೆ-6 ರೊಂದಿಗೆ ನಿಗದಿತ ದಾಖಲೆಗಳೊಂದಿಗೆ ಡಿಕ್ಲೇರೇಷನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ರೀತಿಯಲ್ಲಿ ಹೆಸರನ್ನು ಕಡಿಮೆಗೊಳಿಸಲು ನಮೂನೆ-7 ಹಾಗೂ ವಿವಿಧ ತಿದ್ದುಪಡಿ ಹಾಗೂ ಹೆಸರನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಲು ಸಹ ಅವಕಾಶ ಇರುತ್ತದೆ ಎಂದರು.

ಜಿಲ್ಲೆಯಲ್ಲಿ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 5,62,004 ಪುರುಷರು ಮತ್ತು 5,61,014 ಹಾಗೂ 4 ತೃತೀಯ ಲಿಂಗಿಗಳು ಸೇರಿ ಒಟ್ಟು 11,23,022 ಮತದಾರರಿದ್ದಾರೆ. ಮತಗಟ್ಟೆಗಳ ಪುರ್ನವಿಂಗಡಣೆ ಕಾರ್ಯದ ನಂತರ 78 ಹೊಸ ಮತಗಟ್ಟೆ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 1,523 ಆಗಿದೆ ಎಂದರು.

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಜಾಗರೂಕತೆಯಿಂದ ಪರಿಶೀಲನೆ ಮಾಡಿ, ಯಾವುದೇ ಅರ್ಹ ಮತದಾರರು, ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುವುದು. ಈ ಕುರಿತ ಪ್ರತೀ ವಾರದ ವರದಿಯ ವಿವರಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೂ ನೀಡಲಾಗುವುದು. ಅ. 22 ರ ವರೆಗೆ ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟಕರ್, ರಮೇಶ್ ಮುದಗೇಕರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ್ ಸೋನಿ, ವಕ್ತಾರ ಉದಯ ಭೋವಿ, ಕೃಷ್ಣ ಲಿಂಗಣಕರ್, ಜ್ಞಾನೇಶ್ವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ