ಯಲಬುರ್ಗಾ: ಯಾಂತ್ರಿಕ ಜೀವನದಲ್ಲಿ ಮಾನಸಿಕ ಒತ್ತಡ ನಿಯಂತ್ರಿಸಲು ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಮಾನವ ಒತ್ತಡದ ಬದುಕು ನಡೆಸುತ್ತಿದ್ದಾನೆ.ಇದರಿಂದ ಅಮೂಲ್ಯ ಜೀವನ ಹಾಳಾಗುತ್ತಿದೆ. ಪ್ರತಿ ವ್ಯಕ್ತಿಯ ನೈತಿಕ ಸ್ಥೈರ್ಯ ಹೆಚ್ಚಲು ಸತ್ಸಂಗ, ಪ್ರವಚನ, ಪ್ರಾರ್ಥನೆ, ಭಜನೆಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಅನುಭಾವಿಗಳ ನುಡಿ ಕೇಳುವುದು ಸುಂದರ ಬದುಕಿಗೆ ರಹದಾರಿಯಾಗಲಿದೆ.ಗ್ರಾಮೀಣ ಪ್ರದೇಶಗಳಲ್ಲಿ ಜನ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಜತೆಗೆ ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ, ಮಾನಸಿಕ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಕನಕರಾಯ ಭಜಂತ್ರಿ ಮಾತನಾಡಿದರು. ಮಲ್ಲಪ್ಪ ಚೌದ್ರಿ ಅಧ್ಯಕ್ಷತೆ ವಹಿಸಿದ್ದರು. ಹಾಳಕೇರಿ ಚಂದ್ರಶೇಖರಪ್ಪ ಕೋಗಿಲೆ, ಮಂಗಳೇಶ ಶ್ಯಾಗೋಟಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಈ ವೇಳೆ ಪ್ರಮುಖರಾದ ವಿರೂಪಾಕ್ಷಪ್ಪ ವಾರದ, ಕಳಕನಗೌಡ ಪಾಟೀಲ್, ರಾಜಶೇಖರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ ಇತರರು ಇದ್ದರು.