ಬಾಳೆಹೊನ್ನೂರು: ಹಣ ಕಳೆದರೆ ಮತ್ತೆ ಗಳಿಸಬಹುದು. ಆದರೆ ಮಾತಿನಿಂದ ಕಳೆದುಕೊಂಡ ಸಂಬಂಧ ತಿರುಗಿ ಪಡೆಯಲಾಗದು. ವ್ಯಕ್ತಿತ್ವ ಅನ್ನುವುದು ಆಸ್ತಿ ಅಂತಸ್ತಿನಲ್ಲಿ ಇರುವುದಿಲ್ಲ. ಅದು ಆಲೋಚನೆ ಮತ್ತು ಆಚರಣೆಗಳಲ್ಲಿ ಇರುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಹುಣ್ಣಿಮೆ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಹುಟ್ಟಿದ್ದು ಸಾಯುವುದಕ್ಕಲ್ಲ ಸಾಧಿಸುವುದಕ್ಕೆ. ಬದುಕಿದ್ದು ದ್ವೇಷ ಬೆಳೆಸುವುದಕ್ಕಲ್ಲ ಪ್ರೀತಿ ವಿಶ್ವಾಸ ಗಳಿಸಲಿಕ್ಕೆ ಎಂಬುದನ್ನು ಮರೆಯಬಾರದು. ಪ್ರಭಾವ ನೋಡಿ ಹತ್ತಿರ ಬರುವ ಜನರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರೇ ನಿಜವಾದ ಹಿತೈಷಿಗಳು. ಹಣದ ಹಿಂದೆ ಓಡಿದರೆ ಕುಳಿತುಕೊಳ್ಳುವಷ್ಟು ಸಮಯ ಸಿಗುವುದಿಲ್ಲ. ಸಂಬಂಧಗಳ ಜೊತೆ ಸಾಗಿದರೆ ಗೌರವದ ಜೊತೆ ಕಷ್ಟಗಳಿಗೆ ಸ್ಪಂದಿಸುವ ಹೃದಯಗಳು ಸಿಗುತ್ತವೆ. ನಗುವಿನಲ್ಲಿ ಜೊತೆಯಾಗಿರುವ ನೂರು ಜನರಿಗಿಂತ ನೋವಿನಲ್ಲಿ ಜೊತೆಯಾಗಿರುವ ಒಬ್ಬರಿದ್ದರೆ ಸಾಕು. ಪರಿಸ್ಥಿತಿಯನ್ನು ಬದಲಿಸುವುದು ಕಷ್ಟವಾದಾಗ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಉತ್ತಮ ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು. ಕಲಕೇರಿ ಗುರು ಸಿದ್ಧರಾಮ ಶಿವಾಚಾರ್ಯರು, ಜಳಕೋಟಿನ ಮಠಾಧ್ಯಕ್ಷ , ದೋರನಹಳ್ಳಿ ಅಭಿನವ ಮಹಾಂತೇಶ್ವರ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ.ರಾಜೇಗೌಡ, ಗ್ರಾಪಂ ಅಧ್ಯಕ್ಷ ರವಿಚಂದ್ರ, ಮಹೇಶ ಆಚಾರ್ಯ, ಜಯಪ್ರಕಾಶಗೌಡ ಪಾಲ್ಗೊಂಡು ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು. ಇದೇ ಸಂದರ್ಭದಲ್ಲಿ 13 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ನೀಡಲಾಯಿತು.
ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಸಂದರ್ಭದಲ್ಲಿ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದಿಂದ ಆಗಮಿಸಿದ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಿತು.