ಕುಷ್ಟಗಿ:
ಕುಷ್ಟಗಿ-ಹುಬ್ಬಳ್ಳಿ ನಡುವೆ ರೈಲು ಸಂಚರಿಸುವ ಹಲವು ವರ್ಷಗಳ ಕನಸು ನನಸಾಗುತ್ತಿದ್ದು ಮೇ 15ರಂದು ಅಧಿಕೃತ ಚಾಲನೆ ದೊರೆಯಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ-ವಾಡಿ ರೈಲು ಮಾರ್ಗ ಕುಷ್ಟಗಿ ವರೆಗೆ ಮುಗಿದಿದ್ದು ಮೇ 15ರಂದು ಬೆಳಗ್ಗೆ 10ಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಂದು ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಈ ರೈಲು ಚಾಲನೆಗೊಂಡ ದಿನದಿಂದ ದಿನಕ್ಕೆರಡು ಬಾರಿ ಓಡಿಸುವ ಚಿಂತನೆ ಇದ್ದು ಸಮಯ ನಿಗದಿಗೊಳಿಸಿಲ್ಲ. ಈ ರೈಲು ಕುಷ್ಟಗಿ-ಹುಬ್ಬಳ್ಳಿಗೆ ಸಂಚರಿಸಲಿದ್ದು ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.ಈ ರೈಲು ಚಾಲನೆ ಹಾಗೂ ನಿಲ್ದಾಣ ಉದ್ಘಾಟನೆಯ ದಿನದಂದು ತಾಲೂಕಿನ ಎಲ್ಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಚಿವರಿಗೆ ಹಾಗೂ ರೈಲು ಅಧಿಕಾರಿಗಳಿಗೆ ಕುಷ್ಟಗಿ-ಬೆಂಗಳೂರು ರೈಲು ಸಂಚಾರ ಹಾಗೂ ಕುಷ್ಟಗಿ-ಘಟಪ್ರಭಾ ರೈಲು ಮಾರ್ಗಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರುಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ ಬಸವರಾಜ ಮಾತನಾಡಿ, ಕುಷ್ಟಗಿಯಿಂದ ರೈಲು ಸಂಚರಿಸುವುದು ಐತಿಹಾಸಿಕ ದಿನವಾಗಿದೆ. ನಮ್ಮ ಹಿರಿಯರು ಕಂಡಂತಹ ಕನಸು ನನಸಾಗುವ ದಿನವಾಗಿದೆ. ಇಷ್ಟು ದಿನ ಕುಷ್ಟಗಿಗೆ ತಲುಪಲು ಹೈವೆ ಒಂದೇ ಇತ್ತು. ಇನ್ನೂ ಮುಂದೆ ರೈಲು ಸಂಚಾರ ಕೂಡ ಆಗಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ರೈಲು ಸಂಚಾರಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.
ರೈಲ್ವೆ ಇಲಾಖೆಯ ಎಇಇ ಅಶೋಕ ಮುದಗೌಡರ ಮಾತನಾಡಿ, ರೈಲು ಚಾಲನೆ ಹಾಗೂ ರೈಲು ನಿಲ್ದಾಣದ ಉದ್ಘಾಟನೆಯು ಮೇ 15ರಂದು ನಡೆಯಲಿದ್ದು ಇದಕ್ಕೆ ಬೇಕಾದಂತಹ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ರೈಲು ಸಂಚಾರದ ಚಾಲನೆಯ ಮರುದಿನದಿಂದಲೇ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದರು.ಈ ವೇಳೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಅಶೋಕ ಬಳೂಟಗಿ, ವೀರೇಶ ಬಂಗಾರಶೆಟ್ಟರ, ಕಲ್ಲೇಶ ತಾಳದ, ಉಮೇಶ ಯಾಧವ, ಬಸವರಾಜ ಗಾಣಿಗೇರ, ಮಹಾಂತಯ್ಯ ಅರಳೇಲಿಮಠ ಇದ್ದರು.
ವೇದಿಕೆ ಸ್ಥಳ ಪರಿಶೀಲನೆ...ಶಾಸಕ ದೊಡ್ಡನಗೌಡ ಪಾಟೀಲ ಅವರು ರೈಲು ನಿಲ್ದಾಣಕ್ಕೆ ಭೇಟಿ ನೀಡಿ ವೇದಿಕೆಯ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದರು. ಎಇಇ ಅಶೋಕ ಮುದಗೌಡರ ಅವರಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.