ಕನ್ನಪಪ್ರಭ ವಾರ್ತೆ ಶ್ರೀರಂಗಪಟ್ಟಣ
ಅರಣ್ಯ, ಸರ್ಕಾರಿ ಗೋಮಾಳ ಹಾಗೂ ದರಖಾಸ್ತು ಮಂಜೂರಾತಿ ವ್ಯವಸಾಯ ಜಮೀನುಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿದ ಸದಸ್ಯರು, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರಿಗೆ ಅಕ್ರಮ ಗಣಿಗಾರಿಕೆ ಸಂಬಂಧ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಚನ್ನನಕೆರೆ, ಗೌಡಹಳ್ಳಿ, ಗಣಂಗೂರು, ಜಕ್ಕನಹಳ್ಳಿ, ಸಿದ್ದಾಪುರ, ಕಾಳೇನಹಳ್ಳಿ, ಟಿ.ಎಂ.ಹೊಸೂರು, ನೀಲನಕೊಪ್ಪಲು, ಹಂಗರಹಳ್ಳಿ ಹಾಗೂ ಮುಂಡುಗದೊರೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅರಣ್ಯ, ಸರ್ಕಾರಿ ಗೋಮಾಳ ಹಾಗೂ ದರಖಾಸ್ತು ಮೂಲಕ ಮಂಜೂರಾತಿ ಪಡೆದುಕೊಂಡಿರುವ ರೈತರ ವ್ಯವಸಾಯ ಜಮೀನುಗಳನ್ನು ಜಲ್ಲಿ ಉದ್ಯಮಿಗಳು ಗುತ್ತಿಗೆ ಮಾಡಿಕೊಂಡು ಬ್ಲಾಸ್ಟಿಂಗ್ ಮಾಡಿ, ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಲ್ಲುಗಳನ್ನು ಟಿಪ್ಪರ್‌ಗಳ ಮೂಲಕ ಅವರ ಮಾಲೀಕತ್ವದ ಜಲ್ಲಿ ಕ್ರಷರ್‌ಗಳಿಗೆ ಸಾಗಿಸಿ, ಕ್ರಷರ್‌ಗಳನ್ನು ನಡೆಸುವ ಮೂಲಕ ದಿನವೊಂದಕ್ಕೆ ಕೋಟ್ಯಾಂತರ ರು. ವಹಿವಾಟು ನಡೆಸುತ್ತಿರುವ ಇವರು, ಸರ್ಕಾರಕ್ಕೆ ಯಾವುದೇ ರಾಜಧನ ಹಾಗೂ ಇನ್ನಿತರೆ ತೆರಿಗೆಗಳನ್ನು ಪಾವತಿಸುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟವಾಗುತ್ತಿದೆ ಎಂದು ದೂರಿದರು.
ಈ ಹಿಂದೆ 2020ರಲ್ಲಿ ತಾಲೂಕು ದಂಡಾಧಿಕಾರಿಗಳು 144 ಸೆಕ್ಷನ್ ಜಾರಿ ಮಾಡಿ, ಅಕ್ರಮ ಕಲ್ಲುಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ತಂದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ಅದರೆ, ಇತ್ತೀಚೆಗೆ ಅಕ್ರಮ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಶೀಘ್ರ ಅರಣ್ಯ, ಸರ್ಕಾರಿ ಗೋಮಾಳ ಹಾಗೂ ದರಖಾಸ್ತು ವ್ಯವಸಾಯ ಜಮೀನುಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಗೆ ಬಳಸುತ್ತಿರುವ ಬ್ಲಾಸ್ಟಿಂಗ್ ಸಾಮಗ್ರಿಗಳು, ಟಿಪ್ಪರ್‌ಗಳು, ಹಿಟಾಚಿ ಯಂತ್ರಗಳನ್ನು ವಶಪಡಿಸಿಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಕೋಡಿಶೆಟ್ಟಿಪುರ ತೇಜಸ್, ಕೂಡಲಕುಪ್ಪೆ ತಮ್ಮಣ್ಣ, ಕಾಂತರಾಜು, ದೊಡ್ಡಪಾಳ್ಯ ಚಂದ್ರಶೇಖರ್, ರವೀಂದ್ರ ಸೇರಿ ಇತರರು ಇದ್ದರು.