ಅಜೀಜಅಹ್ಮದ ಬಳಗಾನೂರ
ಕಂಬಿಯಾಚೆಗಿನ ಬದುಕಿಗೆ ಸಿದ್ಧಗೊಳ್ಳುತ್ತಿರುವ ಕೈದಿಗಳೇ ಇನ್ನು ಮುಂದೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಲಿದ್ದಾರೆ.
ಶಿಕ್ಷೆ ಅನುಭವಿಸುತ್ತಿರುವವರ ಕೈಗೆ ಉದ್ಯೋಗದ ಅವಕಾಶ ನೀಡಿ ಅವರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಹಾಗೂ ಧಾರವಾಡ ಕೇಂದ್ರ ಕಾರಾಗೃಹದ ವತಿಯಿಂದ ಪೆಟ್ರೋಲ್ ಬಂಕ್ ಸ್ಥಾಪಿಸಲಾಗುತ್ತಿದೆ.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಎಚ್‌ಪಿ ಪೆಟ್ರೋಲ್ ಬಂಕ್ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಕಾಮಗಾರಿ ಕೊಂಚ ವಿಳಂಬವಾಗಿದ್ದರೂ ನವೆಂಬರ್ ಅಂತ್ಯದೊಳಗೆ ಬಂಕ್ ಕಾರ್ಯಾರಂಭಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಕಾರಾಗೃಹ ಇಲಾಖೆಗೆ ಆದಾಯದ ಮೂಲ ಸೃಷ್ಟಿಸುವ ಜತೆಗೆ ಸಜಾ ಬಂದಿಗಳ ಪುನರ್ವಸತಿಗೂ ಹೊಸ ವೇದಿಕೆ ಸಿಗಲಿದೆ.
ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಲು ಕನಿಷ್ಠ 8 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿರುವ ಹಾಗೂ ಉತ್ತಮ ನಡತೆ ಹೊಂದಿರುವ ಸಜಾ ಬಂದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾರಾಗೃಹದ ಅಡುಗೆ, ಕಚೇರಿ ಹಾಗೂ ಇತರ ವಿಭಾಗಗಳಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಬಂದಿಗಳ ಪೈಕಿ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶವಿದೆ.
ಜೈಲಲ್ಲ ಪುನರ್ವಸತಿ ಕೇಂದ್ರ:
ಬಂಕ್ ಪಕ್ಕದಲ್ಲೇ ಜೈಲು ಮಳಿಗೆ:
ರಾಜ್ಯದಲ್ಲಿ ಕಾರಾಗೃಹ ಇಲಾಖೆಯ ವತಿಯಿಂದ ನಾಲ್ಕು ಪೆಟ್ರೋಲ್ ಬಂಕ್ ಆರಂಭಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಧಾರವಾಡ, ಬೆಂಗಳೂರು, ಬೆಳಗಾವಿ ಹಾಗೂ ಬಳ್ಳಾರಿ ಸೇರಿದಂತೆ ನಾಲ್ಕು ಕಾರಾಗೃಹಗಳಿಗೆ ಪೆಟ್ರೋಲ್ ಬಂಕ್ ತೆರೆಯುವ ಅವಕಾಶ ಸಿಕ್ಕಿದೆ. ಇತರ ಕಡೆಗಳಲ್ಲಿ ದಾಖಲೆ ಪರಿಶೀಲನೆ ಸೇರಿದಂತೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಧಾರವಾಡದಲ್ಲಿ ಮಾತ್ರ ಕಾಮಗಾರಿ ಆರಂಭವಾಗಿದೆ. ಪೆಟ್ರೋಲ್ ಬಂಕ್‌ನ ಜಮೀನು ಕಾರಾಗೃಹ ಇಲಾಖೆಗೆ ಸೇರಿದ್ದು, ಬಂಕ್ ಸ್ಥಾಪನೆಗೆ ಅಗತ್ಯ ಸೌಲಭ್ಯ ಹಾಗೂ ಇಂಧನ ಪೂರೈಕೆಯನ್ನು ಸಂಬಂಧಿತ ಸಂಸ್ಥೆ ನಿರ್ವಹಿಸಲಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಕ್‌ನ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.ಶಿಕ್ಷೆಯ ಜತೆಗೆ ಬದುಕು ಕಟ್ಟಿಕೊಳ್ಳುವ ಅವಕಾಶವೂ ಸಿಗಬೇಕು. ಉತ್ತಮ ನಡತೆಯ ಬಂದಿಗಳಿಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ನೀಡುವ ಮೂಲಕ ಅವರಲ್ಲಿ ಶಿಸ್ತು, ಜವಾಬ್ದಾರಿ, ಉದ್ಯೋಗ ಕೌಶಲ್ಯ ಬೆಳೆಸುವುದು ಉದ್ದೇಶ.