ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್, ಡೀಸೆಲ್ ಸೆಸ್

KannadaprabhaNewsNetwork |  
Published : Jul 19, 2025, 02:00 AM IST
18ಕೆಪಿಎಲ್22 ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ನಲ್ಲಿ ನಡೆದ ಕಾರ್ಮಿಕರ ಗುರುತಿನ ಚೀಟಿ ನೀಡುವ ಉದ್ಘಾಟನ ಸಮಾರಂಭ | Kannada Prabha

ಸಾರಾಂಶ

ಈಗಾಗಲೇ ಹಾಕುತ್ತಿರುವ ಸೆಸ್‌ನ್ನೇ ಕೊಡುವಂತೆ ಕೇಳುತ್ತಾರೋ ಅಥವಾ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೊಸ ಸೆಸ್ ವಿಧಿಸಿ ನೀಡುವಂತೆ ಕೇಳುತ್ತಾರೆ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಲಿಲ್ಲ.

ಕೊಪ್ಪಳ:

ರಾಜ್ಯದಲ್ಲಿ ಸಂಘಟಿತ ಸೇರಿದಂತೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್‌ ಸೆಸ್ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿದ್ದು, ಶೀಘ್ರದಲ್ಲಿಯೇ ಅದಕ್ಕೆ ಸಮ್ಮತಿ ದೊರೆಯುವ ವಿಶ್ವಾಸವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಶುಕ್ರವಾರ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದರೆ, ಈಗಾಗಲೇ ಹಾಕುತ್ತಿರುವ ಸೆಸ್‌ನ್ನೇ ಕೊಡುವಂತೆ ಕೇಳುತ್ತಾರೋ ಅಥವಾ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೊಸ ಸೆಸ್ ವಿಧಿಸಿ ನೀಡುವಂತೆ ಕೇಳುತ್ತಾರೆ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಲಿಲ್ಲ. ಆದರೆ, ಇದರಿಂದ ಬರೋಬ್ಬರಿ ₹1200ರಿಂದ ₹ 1300 ಕೋಟಿ ಬರುತ್ತದೆ. ಆಗ ರಾಜ್ಯದಲ್ಲಿರುವ ಸಂಘಟಿತ ಮತ್ತು ಅಂಘಟಿಕ ಕಾರ್ಮಿಕರ ಕಲ್ಯಾಣಕ್ಕಾಗಿ ಇನ್ನಷ್ಟು ಯೋಜನೆ ಜಾರಿಗೊಳಿಸಲಾಗುವುದು ಎಂದರು.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಇದನ್ನು ಜಾರಿ ಮಾಡಿ ಕಾರ್ಮಿಕರ ಕಲ್ಯಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರಾಜ್ಯದಲ್ಲಿ ಕಾರ್ಮಿಕರ ಹಿತಕ್ಕಾಗಿ ಮೂರು ಬಿಲ್‌ ಜಾರಿಗೆ ತಂದಿದ್ದೇವೆ. ದೇಶದಲ್ಲಿಯೇ ಕಾರ್ಮಿಕರ ಕಲ್ಯಾಣಕ್ಕಾಗಿ ಇಂಥ ಬಿಲ್ ಎಲ್ಲಿಯೂ ತಂದಿಲ್ಲ ಎಂದ ಅವರು, ಗಿಗ್ ಕಾಯ್ದೆಯನ್ನು ಈಗಾಗಲೇ ಅಮೇಜಾನ್ ಸೇರಿದಂತೆ ಅನೇಕ ಕಂಪನಿಗಳು ಅಳವಡಿಸಿಕೊಂಡಿವೆ. ಸಿನಿಮಾ ವಲಯದಲ್ಲೂ ದೊಡ್ಡ ಸಂಖ್ಯೆಯ ಕಾರ್ಮಿಕರಿದ್ದಾರೆ. ಇವರಿಗಾಗಿ ಸಿನಿ ಬಿಲ್ ತರಲಾಗಿದೆ ಎಂದ ಸಚಿವರು, ಸಾರಿಗೆ ಕಾಯ್ದೆ ಜಾರಿಗೊಳಿಸಿದ್ದು ಇದರಿಂದ ಸಣ್ಣ-ಪುಟ್ಟ ವಾಹನ ಚಲಾಯಿಸುವ ಚಾಲಕರು ಸಹ ಇದರ ವ್ಯಾಪ್ತಿಗೆ ಬರುತ್ತಾರೆ. ಮೃತರಿಗೆ ₹ 5 ಲಕ್ಷ ಪರಿಹಾರ ದೊರೆಯಲಿದೆ ಎಂದರು.

ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ 4.80 ಲಕ್ಷ ದುರಂತ ನಡೆಯುತ್ತವೆ. ಇದರಿಂದ ದೇಶದ ಜಿಡಿಪಿ ಮೇಲೆ ಪೆಟ್ಟು ಬೀಳುತ್ತಿದೆ ಹಾಗೂ ಆ ಕುಟುಂಬದ ಮೇಲೆಯೂ ಭಾರಿ ಪರಿಣಾಮ ಬೀರುತ್ತದೆ. ಇದಕ್ಕಾಗಿಯೇ ಅವರಿಗೆ ನೆರವಾಗಲಿ ಎಂದು ಸಾರಿಗೆ ಕಾಯ್ದೆ ಜಾರಿ ಮಾಡಿರುವುದಾಗಿ ಹೇಳಿದರು.

ದೇಶದ ಸಂಘಟಿತ ಕಾರ್ಮಿಕರ ಹಿತಕಾಯಲು ಸಾಕಷ್ಟು ಕಾಯ್ದೆಗಳಿದ್ದು ಅಸಂಘಟಿಕ ಕಾರ್ಮಿಕರ ಹಿತಕಾಯಲು ಯಾವುದೇ ಯೋಜನೆಗಳು ಇರಲಿಲ್ಲ. ಆದರೆ, ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಹಿತಕಾಯಲು ಸಹ ಸಾಕಷ್ಟು ಯೋಜನೆ ಜಾರಿಗೊಳಿಸಲಾಗಿದೆ ಎಂದ ಅವರು, ಸ್ಥಳೀಯ ಕಾರ್ಖಾನೆ ಸೇರಿದಂತೆ ಕಂಪನಿಗಳಲ್ಲಿ ಎಸ್ಸಿ-ಎಸ್ಟಿಗಳಿಗೆ ಉದ್ಯೋಗ ನೀಡಿದರೆ ಅವರಿಗೆ ಎರಡು ವರ್ಷ ₹ 6ರಿಂದ ₹ 7000 ಪ್ರೋತ್ಸಾಹಧನ ನೀಡುತ್ತವೆ. ಈ ಮೂಲಕ ಸ್ಥಳೀಯರಿಗೆ ಆದ್ಯತೆ ದೊರೆಯಲಿ ಎಂದರು.

ಹೊರಗುತ್ತಿಗೆ ನೌಕರರ ಹಿತಕಾಯಲು ಈಗಾಗಲೇ ಸೊಸೈಟಿ ಸ್ಥಾಪಿಸಿ, ಅದರಡಿಯಲ್ಲಿಯೇ ವೇತನ ಪಾವತಿಸಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಯಾಗಿದ್ದು, ಕೊಪ್ಪಳದಲ್ಲಿಯೂ ಸೊಸೈಟಿ ಮಾಡಲಾಗಿದೆ. ಇದನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದ ಸಚಿವರು, ಅಸಂಘಟಿತ ವಲಯವನ್ನು ಗುರುತಿಸಿ ಅವರಿಗೂ ಸಹ ನೆರವು ನೀಡುವ ಕಾರ್ಯ ನಡೆದಿದೆ. ಮನೆ ಕೆಲಸ ಮಾಡುವವರನ್ನು ಇದರ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ ₹ 56 ಸಾವಿರ ಕೋಟಿ ವ್ಯಯಿಸುತ್ತಿದ್ದು ದೇಶದಲ್ಲಿಯೇ ಯಾವ ರಾಜ್ಯವೂ ಕೊಡದೆ ಇರುವಷ್ಟು ಹಣವನ್ನು ನೇರವಾಗಿ ಜನರಿಗೆ ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀ ನಿವಾಸ, ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ. ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಕಾರ್ಮಿಕ ಇಲಾಖೆ ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ. ವೆಂಕಟೇಶ ಶಿಂಧಿಹಟ್ಟಿ, ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹ್ಮದ್ ಬಶೀರ್ ಅನ್ಸಾರಿ, ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ, ಅಧಿಕಾರಿಗಳಾದ ಸುಧಾ ಗರಗ, ಮಂಜುಳಾ ವಿಶ್ವನಾಥ, ಎಂ. ಅಶೋಕ, ನಿವೇದಿತಾ, ಬಸವರಾಜ ಹಿರೇಗೌಡ್ರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸೇರಿದಂತೆ ಕಾರ್ಮಿಕರು ಇದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ