ನರಗುಂದದಲ್ಲಿ ಪೆಟ್ರೋಲ್‌ ಬಂಕ್ ಬಂದ್‌: ಜನರ ಪರದಾಟ

KannadaprabhaNewsNetwork |  
Published : Apr 28, 2026, 02:15 AM IST
ನರಗುಂದದ ಪೆಟ್ರೋಲ್‌ ಬಂಕ್‌ನಲ್ಲಿ ಇಂಧನ ತುಂಬಿಸಲು ಬಂದಿದ್ದ ವಾಹನ ಸವಾರರು. | Kannada Prabha

ಸಾರಾಂಶ

ಸೋಮವಾರ ದಿಢೀರ್‌ ಈ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಖಾಲಿಯಾಗಿದೆ. ಇದರಿಂದ ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್‌ ಬಂಕ್‌ಗೆ ಆಗಮಿಸಿ, ಪೆಟ್ರೋಲ್‌, ಡೀಸೆಲ್‌ ಸಿಗದೇ ಮರಳಿ ವಾಪಸ್‌ ಹೋಗುತ್ತಿರುವುದು ಸಾಮಾನ್ಯವಾಗಿತ್ತು.

ನರಗುಂದ: ಇಂಧನ ಪೂರೈಕೆಯಲ್ಲಿ ವ್ಯತ್ಯವಾಗಿದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಸೋಮವಾರ ಇಂಧನ ಖಾಲಿಯಾಗಿದ್ದು, ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌, ಡೀಸೆಲ್‌ಗಾಗಿ ಪರದಾಡಿದರು.

ನರಗುಂದ ಪಟ್ಟಣದಲ್ಲಿ 5 ಪೆಟ್ರೋಲ್‌ ಬಂಕ್‌ಗಳಿವೆ. ಅದೇ ರೀತಿ ತಾಲೂಕಿನ ಚಿಕ್ಕನರಗುಂದದಲ್ಲಿ 1, ಕೊಣ್ಣೂರಿನಲ್ಲಿ 3 ಪೆಟ್ರೋಲ್‌ ಬಂಕ್‌ಗಳಿವೆ. ಆದರೆ ಸೋಮವಾರ ದಿಢೀರ್‌ ಈ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಖಾಲಿಯಾಗಿದೆ. ಇದರಿಂದ ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್‌ ಬಂಕ್‌ಗೆ ಆಗಮಿಸಿ, ಪೆಟ್ರೋಲ್‌, ಡೀಸೆಲ್‌ ಸಿಗದೇ ಮರಳಿ ವಾಪಸ್‌ ಹೋಗುತ್ತಿರುವುದು ಸಾಮಾನ್ಯವಾಗಿತ್ತು.

ಈ ಕುರಿತು ಪಟ್ಟಣದ ಭಾರತ ಪೆಟ್ರೋಲ್ ಬಂಕ್‌ನ ಮಾಲೀಕ ಡಾ. ವೀರನಗೌಡ ವೀರನಗೌಡ್ರ ಮಾತನಾಡಿ, ನಮ್ಮ ಬಂಕ್‌ಗೆ ಬೆಳಗಾವಿಯಿಂದ ಪೆಟ್ರೋಲ್‌, ಡೀಸೆಲ್‌ ಸರಬರಾಜು ಆಗುತ್ತಿದೆ. ಆದರೆ ಭಾನುವಾರ ಬೆಳಗಾವಿಯ ಇಂಧನ ತುಂಬುವ ಘಟಕಕ್ಕೆ ಭಾನುವಾರ ರಜೆ ಇತ್ತು. ಇದರಿಂದ ಬೇಡಿಕೆಗೆ ತಕ್ಕಷ್ಟು ಇಂಧನದ ಸರಬರಾಜು ಆಗಿಲ್ಲ. ಹೀಗಾಗಿ ಸೋಮವಾರ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಲಾಗಿತ್ತು. ಅಲ್ಲದೇ ಬೆಳಗಾವಿಯಿಂದ ಸೋಮವಾರ ಪೆಟ್ರೋಲ್‌, ಡೀಸೆಲ್‌ ತುಂಬಿಕೊಂಡು ಟ್ಯಾಂಕರ್‌ಗಳು ಹೊರಟಿದ್ದು, ಇಲ್ಲಿಗೆ ಪೂರೈಕೆಯಾದ ತಕ್ಷಣ ಬಂಕ್‌ ಮರಳಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಭಾನುವಾರ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ವಾಹನಗಳಿಗೆ ಇಂಧನ ತುಂಬುವ ಘಟಕಗಳಿಗೆ ರಜೆ ಇದ್ದ ಕಾರಣ ಸೋಮವಾರ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಈಗಾಗಲೇ ತಾಲೂಕಿಗೆ ಟ್ಯಾಂಕರ್‌ಗಳು ಇಂಧನ ತುಂಬಿಕೊಂಡು ಬರುತ್ತಿವೆ. ಆದ್ದರಿಂದ ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು. ಮೇ 1ರಂದು ಬುದ್ಧ ಜಯಂತಿ ಆಚರಣೆ

ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಗವಾನ ಬುಧ್ದ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಮೇ 1ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಇತರರು ಪಾಲ್ಗೊಳ್ಳುವರು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ವಚನ ಸಾಹಿತ್ಯ ಪ್ರೇರಣಾದಾಯಕ
ಬಸವಣ್ಣ ನಾನು ಲಿಂಗಾಯತ ಧರ್ಮದವನು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ