ನಾರಾಯಣ ಹೆಗಡೆ
ಶಿಗ್ಗಾಂವಿ ಬಳಿಯ ಗೊಟಗೋಡಿಯಲ್ಲಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪಿಎಚ್.ಡಿ ಪ್ರವೇಶಾತಿ ಪರೀಕ್ಷೆ ನಡೆಸುವ ಪ್ರಕ್ರಿಯೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರ ಅಧಿಕಾರಾವಧಿ ನಾಲ್ಕು ದಿನ ಬಾಕಿ ಇರುವಾಗ ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಜಾನಪದ ಸಂಶೋಧನೆಯಿಂದ ಸುದ್ದಿಯಲ್ಲಿರಬೇಕಿದ್ದ ಜಾನಪದ ವಿಶ್ವವಿದ್ಯಾಲಯ ಒಂದಿಲ್ಲೊಂದು ವಿವಾದದಿಂದಲೇ ಗಮನ ಸೆಳೆಯುತ್ತಿದೆ. ವಿವಿಯಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೂ ಇಲ್ಲಿ ಪಿಎಚ್‌ಡಿ ಮಾಡುವವರ ಸಂಖ್ಯೆ ಮಾತ್ರ ಹುಬ್ಬೇರಿಸುವಂತಿದೆ. ಇಲ್ಲಿಯ ಕೆಲವು ಪಿಜಿ ವಿಭಾಗಗಳಲ್ಲಿ ಪ್ರವೇಶ ಪಡೆದವರ ಸಂಖ್ಯೆ ಎರಡಂಕಿ ದಾಟುತ್ತಿಲ್ಲ. ಆದರೆ, ಪಿಎಚ್‌ಡಿಗೆ ಮಾತ್ರ ಭಾರಿ ಡಿಮ್ಯಾಂಡ್ ಬಂದಿದ್ದು, ಇದೇ ವಿಷಯ ಈಗ ಸರ್ಕಾರದ ಮಟ್ಟಕ್ಕೂ ಹೋಗಿದೆ.ವಿಸಿ ನಿವೃತ್ತಿ ವೇಳೆ ಪರೀಕ್ಷೆ: ವಿವಿ ಕುಲಪತಿ ಟಿ.ಎಂ.ಭಾಸ್ಕರ್ ಅವರ ಅಧಿಕಾರ ಅವಧಿ ಜು.18ಕ್ಕೆ ಮುಗಿಯಲಿದೆ. ಈ ಸಂದರ್ಭದಲ್ಲಿ ತರಾತುರಿಯಲ್ಲಿ, ನಿಯಮ ಬಾಹಿರವಾಗಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ಮಾಡಲಾಗುತ್ತಿದೆ. ಇದೇ ಬರುವ ಜು.13ರಂದು ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ನಿಯಮ ಮೀರಿ ಪಿಎಚ್‌ಡಿಗೆ ಅವಕಾಶ ನೀಡುತ್ತಿರುವುದು, ಮಾರ್ಗದರ್ಶಕರೇ ಇಲ್ಲದಿದ್ದರೂ ಪಿಎಚ್‌ಡಿಗೆ ಆಯ್ಕೆ ಮಾಡುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಜನರು ಇಲ್ಲಿ ಪಿಎಚ್‌ಡಿಗೆ ನೋಂದಾಯಿಸಿಕೊಂಡಿದ್ದಾರೆ. ಈಗ ಮತ್ತೆ ಹೊಸದಾಗಿ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪರೀಕ್ಷೆ ತಡೆಹಿಡಿಯುವಂತೆ ಪತ್ರ: ಸರ್ಕಾರ ಕೇಳಿದ ಅಂಶಗಳ ಕುರಿತು ಸಮರ್ಪಕ ವರದಿ ಸಲ್ಲಿಸುವವರೆಗೆ ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆಯನ್ನು ತಡೆಹಿಡಿಯಬೇಕು ಎಂದು ಮೌಲ್ಯಮಾಪನ ಕುಲಸಚಿವರಿಗೆ ವಿವಿ ಆಡಳಿತ ಕುಲಸಚಿವರು ಪತ್ರ ಬರೆದು ಸೂಚಿಸಿದ್ದಾರೆ. ಇದರಿಂದ ವಿವಿಯಲ್ಲಿ ಯಾವುದೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾದಂತಾಗಿದೆ. ಈ ಬೆಳವಣಿಗೆಯಿಂದ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅನಿಶ್ಚಿತತೆ ಉಂಟಾಗಿದೆ.
ಪಿಎಚ್‌ಡಿ ಪ್ರವೇಶ ಪರೀಕ್ಷೆ ಜು.13ಕ್ಕೆ ನಿಗದಿಯಾಗಿದೆ. ರಜೆಯಲ್ಲಿ ಇರುವುದರಿಂದ ಸರ್ಕಾರದಿಂದ ಸ್ಪಷ್ಪನೆ ಕೋರಿ, ಪರೀಕ್ಷೆ ತಡೆಹಿಡಿಯುವಂತೆ ಬರೆದ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಶನಿವಾರ ಹೋಗಿ ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಹೇಳಿದರು.