ದಾಸೋಹ ಪರಂಪರೆ ಪ್ರತಿಪಾದಿಸಿದ ದಾರ್ಶನಿಕ ಹಡಪದ ಅಪ್ಪಣ್ಣ

KannadaprabhaNewsNetwork |  
Published : Aug 02, 2026, 02:30 AM IST
ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಬಸವಣ್ಣನವರ ಆಪ್ತ ಸಹಚರರಾಗಿದ್ದ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿದ್ದ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಶರಣ ಎನಿಸಿಕೊಂಡಿದ್ದರು.

ಬಳ್ಳಾರಿ: ದುಡಿಮೆಯಿಂದ ಬಂದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಹಸಿದವರಿಗೆ ಅನ್ನ, ನೊಂದವರಿಗೆ ನೆರವು ನೀಡಬೇಕು ಎಂಬ ದಾಸೋಹದ ಪರಂಪರೆಯನ್ನು ಬಲವಾಗಿ ಪ್ರತಿಪಾದಿಸಿದ ಹಡಪದ ಅಪ್ಪಣ್ಣನವರು ವಚನಗಳ ಮೂಲಕ ಜಾತಿ, ಲಿಂಗ ಹಾಗೂ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಿಳಿಸಿದರು.ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಆಪ್ತ ಸಹಚರರಾಗಿದ್ದ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿದ್ದ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಶರಣ ಎನಿಸಿಕೊಂಡಿದ್ದರು. "ಅಪ್ಪಣ್ಣ ಪ್ರಿಯ ಚನ್ನಬಸವಣ್ಣ " ಅಂಕಿತನಾಮದಲ್ಲಿ 300ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸಿದರು. ಅವರ ಪತ್ನಿ ಲಿಂಗಮ್ಮ ಕೂಡ ವಚನಗಾರ್ತಿಯಾಗಿದ್ದು, ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಹಡಪದ ಅಪ್ಪಣ್ಣ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ರುದ್ರಪ್ಪ ಮಾತನಾಡಿ, ಹಡಪದ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಜಾಗ ಹಾಗೂ ವಿಶೇಷ ಅನುದಾನ ಒದಗಿಸಬೇಕು. ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕೆಂದು ಆಗ್ರಹಿಸಿದರು.

ಶ್ರೀಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ, ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಮುದ್ದಟನೂರು ಎಚ್‌. ತಿಪೇಸ್ವಾಮಿ, ಹಡಪದ ಅಪ್ಪಣ್ಣ ಸೇವಾ ಸಮಿತಿಯ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸಿರುಗುಪ್ಪ ತಾಲೂಕಿನ ಎಸ್.ಆರ್.ಎಂ. ಶರಣ ಬಸವ ಅವರ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಜಯಂತಿ ಅಂಗವಾಗಿ ನಗರದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆ ನಡೆಯಿತು. ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆ ಇಂದಿರಾ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ, ತೇರುಬೀದಿ, ಜೈನ್ ಮಾರ್ಕೆಟ್ ಹಾಗೂ ಹೆಚ್.ಆರ್. ಗವಿಯಪ್ಪ ವೃತ್ತ ಮಾರ್ಗವಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಸಂಭ್ರಮದಿಂದ ಸಾಗಿತು. ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು