ಪಟ್ಟಣಕ್ಕೆ ಲಗ್ಗೆ ಇಟ್ಟ ಪ್ಲಾಸಿಕ್ ಗೊಂಬೆಗಳು

KannadaprabhaNewsNetwork |  
Published : Aug 02, 2026, 02:30 AM IST
ಪ್ಲಾಸಿಕ್ ಗೊಂಬೆ ಮಾರಾಟಗಾರರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಎಲ್ಲೆಂದರಲ್ಲಿ ಗಾಳಿ ತುಂಬಿದ ಗೊಂಬೆಗಳು ಕಾಣುತ್ತಿವೆ. | Kannada Prabha

ಸಾರಾಂಶ

ಈಗ ಗಾಳಿ ತುಂಬುವ ಪ್ಲಾಸಿಕ್ ಗೊಂಬೆ ಮಾರಾಟಗಾರರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಎಲ್ಲೆಂದರಲ್ಲಿ ಕಾಣ ಸಿಗುತ್ತಿವೆ.

ಕೈಗೆಟುವ ದರದಲ್ಲಿ ಮಾರಾಟ, ವ್ಯಾಪಾರ ಕೂಡ ಜೋರು । ಮುಂಡಗೋಡನಲ್ಲಿ ಈಗ ಗೊಂಬೆಗಳ ಜಾತ್ರೆಕನ್ನಡಪ್ರಭ ವಾರ್ತೆ ಮುಂಡಗೋಡ

ಗೊಂಬೆಗಳೆಂದರೆ ಯಾವ ಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ? ಯಾವುದಾದರೂ ಜಾತ್ರೆಗೆ ಹೋದರೆ ನನಗೆ ಆ ಗೊಂಬೆ ಬೇಕು ಈ ಗೊಂಬೆ ಬೇಕು ಎಂದು ಮಕ್ಕಳು ಪಾಲಕರಿಗೆ ಕಾಡುವುದು ಸಹಜ. ಈಗ ಗಾಳಿ ತುಂಬುವ ಪ್ಲಾಸಿಕ್ ಗೊಂಬೆ ಮಾರಾಟಗಾರರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಎಲ್ಲೆಂದರಲ್ಲಿ ಕಾಣ ಸಿಗುತ್ತಿವೆ.

ಪಟ್ಟಣದ ಶಿವಾಜಿ ಸರ್ಕಲ್, ಬಸ್ ನಿಲ್ದಾಣ ಸೇರಿ ಸುತ್ತಮುತ್ತ ಎತ್ತ ನೋಡಿದರೂ ಗೊಂಬೆ ವ್ಯಾಪಾರಸ್ಥರೇ ಕಾಣುತ್ತಿದ್ದಾರೆ. ವ್ಯಾಪಾರ ಕೂಡ ಜೋರಾಗಿಯೇ ನಡೆದಿದೆ. ಕನಿಷ್ಠ ದರದಲ್ಲಿ ಕುದುರೆ, ನವಿಲು, ಕೋಳಿ, ಆನೆ, ಜೀಬ್ರಾ, ಹೀಗೆ ತರ ತರಹದ ಗಾಳಿ ತುಂಬಿದ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂಗಡಿ ಅಥವಾ ಜಾತ್ರೆಗಳಿಗೆ ಹೋದರೆ ₹೧೦೦ಕ್ಕೆ ಸಿಗುವ ಗೊಂಬೆಗಳು ಇಲ್ಲಿ ₹೫೦ಕ್ಕೆ ಸಿಗುತ್ತಿರುವುದರಿಂದ ಗ್ರಾಹಕರು ಕೂಡ ಗೊಂಬೆ ಖರೀದಿಸುವಲ್ಲಿ ಹಿಂದೆ ಬೀಳುತ್ತಿಲ್ಲ.

ರಾಜಸ್ಥಾನದಿಂದ ಅಲೆಮಾರಿ ಜನಾಂಗದ ಸುಮಾರು ೧೫-೨೦ ಕುಟುಂಬಗಳು ೪-೫ ಮಹಿಂದ್ರಾ ಪಿಕಪ್ ವಾಹನದಲ್ಲಿ ಗೊಂಬೆಗಳನ್ನು ಹೊತ್ತು ಇಲ್ಲಿಗೆ ಬಂದಿದ್ದು, ಪಟ್ಟಣದ ಶಿವಾಜಿ ಸರ್ಕಲ್, ಬಸ್ ನಿಲ್ದಾಣ, ಬಸವನ ಬೀದಿ ಸುತ್ತ ಹತ್ತಾರು ಕಡೆ ಗೊಂಬೆ ಮಾರಾಟ ಮಾಡುತ್ತಿದ್ದಾರೆ. ದಿನಕ್ಕೆ ಒಬ್ಬೊಬ್ಬರು ಕನಿಷ್ಠ ೧೦೦ಕ್ಕೂ ಅಧಿಕ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಗೊಂಬೆ ಮಾತ್ರವಲ್ಲದೇ ಸಂಜೆಯಾಗುತ್ತಿದ್ದಂತೆ ಗಾಳಿ ತುಂಬಿದ ಬಾಲ್, ದೀಪದ ಬಲೂನ್ ಕೂಡ ಮಾರಾಟ ಮಾಡುತ್ತಾರೆ. ಇದು ನೋಡುಗರಿಗೆ ಆಕರ್ಷಣೀಯ ಹಾಗೂ ಬೆಲೆ ಕೂಡ ಕಡಿಮೆಯಾಗಿದ್ದರಿಂದ ನೋಡಿದ ತಕ್ಷಣ ಜನ ಇವುಗಳನ್ನು ಖರೀದಿಸಲು ಮುಂದಾಗುತ್ತಾರೆ. ಬೇರೆ ಯಾವುದೇ ಉದ್ಯೋಗವಿಲ್ಲದ ಕಾರಣ ಗೊಂಬೆ ವ್ಯಾಪಾರವೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಇತರ ಭಾಗಗಳಿಗೆ ಹೋಲಿಸಿದರೆ ಪಟ್ಟಣದಲ್ಲಿ ವ್ಯಾಪಾರ ಚೆನ್ನಾಗಿದೆ. ಗೊಂಬೆಯ ವ್ಯಾಪಾರಕ್ಕೆ ಜನರಿಂದ ಸ್ಪಂದನೆ ಸಿಗುತ್ತಿದೆ. ೨-೩ ದಿನ ಇಲ್ಲಿ ವ್ಯಾಪಾರ ಮಾಡಿ ಬಳಿಕ ಬೇರೆಡೆಗೆ ತೆರಳುತ್ತೇವೆ ಎನ್ನುತ್ತಾರೆ ಗೊಂಬೆ ವ್ಯಾಪಾರಸ್ಥ ರಾಮಪ್ರಸಾದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು