ಬೈಲೂರಿನ ಬಸ್ತಿಮಕ್ಕಿ-ಎಡಬಡ್ರು ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದ್ದಕ್ಕೆ ಆಕ್ರೋಶ

KannadaprabhaNewsNetwork |  
Published : Aug 02, 2026, 02:30 AM IST
ಭಟ್ಕಳದ ಬೈಲೂರು ಗ್ರಾಪಂ ವ್ಯಾಪ್ತಿಯ ಬಸ್ತಿಮಕ್ಕಿ-ಎಡಬಡ್ರು ರಸ್ತೆ ಬದಿಯ ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಕಸ ಹಾಗೂ ಕೋಳಿ ತ್ಯಾಜ್ಯ ಹಾಕುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ತಾಲ್ಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಬಸ್ತಿಮಕ್ಕಿ-ಎಡಬಡ್ರು ರಸ್ತೆ ಬದಿಯ ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಕಸ ಹಾಗೂ ಕೋಳಿ ತ್ಯಾಜ್ಯ ಹಾಕುತ್ತಿರುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲ್ಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಬಸ್ತಿಮಕ್ಕಿ-ಎಡಬಡ್ರು ರಸ್ತೆ ಬದಿಯ ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಕಸ ಹಾಗೂ ಕೋಳಿ ತ್ಯಾಜ್ಯ ಹಾಕುತ್ತಿರುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತ್ಯಾಜ್ಯ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜಾನುವಾರುಗಳು ಸಂಚರಿಸುವ ಈ ಪ್ರದೇಶದಲ್ಲಿ ಕಸ ಮತ್ತು ಕೋಳಿ ತ್ಯಾಜ್ಯ ಸುರಿಯುವುದರಿಂದ ದುರ್ವಾಸನೆ ಹರಡಿ ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತಿವೆ. ಗ್ರಾಮಸ್ಥರು ಅನೇಕ ಬಾರಿ ಸ್ವಯಂಪ್ರೇರಿತರಾಗಿ ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡಿದರೂ, ಕಸ ಸುರಿಯುವವರ ಕೃತ್ಯ ಮಾತ್ರ ಮುಂದುವರಿದಿದೆ. ಹಗಲು ಹೊತ್ತಲ್ಲೇ ಕೋಳಿ ತ್ಯಾಜ್ಯ ತುಂಬಿದ ವಾಹನವನ್ನು ಅರಣ್ಯ ಇಲಾಖೆಯ ಜಾಗದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರು ವಾಹನವನ್ನು ತಡೆದು, ಸಂಬಂಧಪಟ್ಟವರನ್ನು ಅರಣ್ಯ ಇಲಾಖೆ ಹಾಗೂ ಬೈಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಗ್ರಾಮ ಪಂಚಾಯಿತಿ ತಪ್ಪಿತಸ್ಥರಿಗೆ ದಂಡ ವಿಧಿಸಿ ವಸೂಲಿ ಮಾಡಿತು. ಕೇವಲ ದಂಡ ವಿಧಿಸಿ ಬಿಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರ ಪರಿಣಾಮವಾಗಿ ರಾತ್ರಿ ವೇಳೆಯಲ್ಲಿ ಹಾಗೂ ಜನರ ಸಂಚಾರ ಕಡಿಮೆ ಇರುವ ಸಮಯದಲ್ಲಿ ಅಕ್ರಮ ಕಸ ವಿಲೇವಾರಿ ನಿರಂತರವಾಗಿ ನಡೆಯುತ್ತಿದೆ. ಅಕ್ರಮವಾಗಿ ಕಸ, ತ್ಯಾಜ್ಯ ಹಾಕುವುದಕ್ಕೆ ಶಾಶ್ವತ ಕಡಿವಾಣ ಹಾಕಲು ತಕ್ಷಣ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳನ್ನು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು