ಮೊಬೈಲ್ ನೋಡುತ್ತಾ ಆಹಾರ ಸೇವಿಸುವುದು ಮನಸ್ಸಿಗೆ ಮಾರಕ
ಕನ್ನಡಪ್ರಭ ವಾರ್ತೆ ಗೋಕರ್ಣ
ಮನುಷ್ಯನ ದೇಹವನ್ನು ಸುಸ್ಥಿತಿಯಲ್ಲಿಡಲು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಅಂಶಗಳು ಪ್ರಮುಖವಾಗಿವೆ. ಈ ಮೂರು ಸಮರ್ಪಕವಾಗಿದ್ದಾಗ ಶರೀರ ಸ್ವಸ್ಥವಾಗಿರಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಪ್ರವಚನ ಆರ್ಶೀವಚನ ನೀಡಿದ ಶ್ರೀಗಳು, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಆಧಾರ ಸ್ತಂಭಗಳನ್ನು ಸಮತೋಲನದಲ್ಲಿ ಕಾಪಾಡಿಕೊಂಡರೆ ದೇಹವೂ ಆರೋಗ್ಯಕರವಾಗಿರುತ್ತದೆ, ಮನಸ್ಸು ಶಾಂತವಾಗಿರುತ್ತದೆ ಹಾಗೂ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಇವುಗಳಲ್ಲಿ ವ್ಯತ್ಯಯ ಉಂಟಾದರೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಆರಂಭವಾಗುತ್ತವೆ. ಇದರ ಜೊತೆಗೆ, ದೇಹವನ್ನು ನಿಲ್ಲಿಸುವ ಪ್ರಧಾನ ಸ್ತಂಭ ಕರ್ಮವಾಗಿದೆ. ಕರ್ಮವೇ ಜೀವಿತಾವಧಿಯನ್ನು ನಿರ್ಧರಿಸುತ್ತದೆಯಾದರೂ, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸರಿಯಾಗಿರದಿದ್ದರೆ ಆರೋಗ್ಯ ಹದಗೆಡುವುದು ಅನಿವಾರ್ಯ ಎಂದು ವಿವರಿಸಿದರು.ಆಹಾರ ಮತ್ತು ಮನಸ್ಸಿನ ನಡುವೆ ಆಪ್ತ ಸಂಬಂಧವಿದೆ. ಯಾವ ರೀತಿಯ ಆಹಾರ ಸೇವಿಸುತ್ತೇವೆಯೋ, ಅದೇ ರೀತಿಯ ಮನೋಭಾವ ಬೆಳೆದು ಬರುತ್ತದೆ. ಸಾತ್ವಿಕ ಆಹಾರವು ಶಾಂತ ಮನಸ್ಸನ್ನು ಬೆಳೆಸಿದರೆ, ಅತಿಯಾದ ಖಾರ, ಹುಳಿ ಹಾಗೂ ಅಸಮತೋಲನ ಆಹಾರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದರು.ನಾವು ಏನು ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ಊಟ ಮಾಡುವಾಗ ಏನು ಯೋಚಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಆಹಾರ ಸೇವಿಸುವ ಸಮಯದಲ್ಲಿ ದೇವರ ಸ್ಮರಣೆ, ಶಾಂತ ಮನಸ್ಸು ಹಾಗೂ ಕೃತಜ್ಞತೆಯ ಭಾವ ಇರಬೇಕು. ದೂರದರ್ಶನ, ಮೊಬೈಲ್ ಅಥವಾ ಅಶಾಂತ ಚಿಂತನೆಗಳೊಂದಿಗೆ ಊಟ ಮಾಡುವುದರಿಂದ ಆಹಾರದ ಪಾವಿತ್ರ‍್ಯ ಹಾಳಾಗುತ್ತದೆ ಮಾತ್ರವಲ್ಲ ಅದು ಮನಸ್ಸಿನಮೇಲೂ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಶ್ರೀಕ್ಷೇತ್ರ ಹೊರನಾಡಿನ ಧರ್ಮದರ್ಶಿ ಜಿ. ಭೀಮೇಶ್ವರ ಜೋಶಿ ದಂಪತಿ ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿ, ಅನ್ನಪೂರ್ಣೇಶ್ವರಿಯ ಪ್ರಸಾದ ರೂಪದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯಕ್ಕೆ ಸುವಸ್ತುಗಳನ್ನು ಸಮರ್ಪಿಸಿದರು. ಹೊರನಾಡಿನ ಧರ್ಮದರ್ಶಿಗಳ ಕುಟುಂಬದ ಸದಸ್ಯರು, ಶ್ರೀಮಠದ ಧರ್ಮಕರ್ಮ ಖಂಡದ ಸಮರ್ಥ ಭಟ್ಟ ಮಂಕಳಲೆ, ವಿನಾಯಕ ಬೆಟ್ಕೂರು, ಕೇಶವಕಿರಣ, ಡಾ. ರಾಮಕೃಷ್ಣ ಭಟ್ ಕೂಟೇಲು, ಮಾತೃತ್ವಂನ ಪ್ರಮುಖರಾದ ಈಶ್ವರೀ ಬೇರ್ಕಡವು, ಸ್ವಾತಿ ಭಾಗ್ವತ್, ಗೀತಾ ಯಾಜಿ, ದಿನ ಪ್ರಧಾನರಾದ ಕೃಷ್ಣಾನಂದ ಭಟ್ ದಂಪತಿ ಉಪಸ್ಥಿತರಿದ್ದರು.
ಆಯುರ್ವೇದದಲ್ಲಿ ನಿದ್ರೆಯನ್ನು ತಧಾತ್ರಿ ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸರಿಯಾದ ಸಮಯದಲ್ಲಿ ಬರುವ ನಿದ್ರೆ ದೇಹವನ್ನು ದುರಸ್ತಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಸಮಯಕ್ಕೆ ನಿದ್ರೆ ಮಾಡದೆ, ರಾತ್ರಿ ತಡವಾಗಿ ಮಲಗುವುದು ಹಾಗೂ ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಸರಿಯಲ್ಲದ ಸಮಯದಲ್ಲಿ ಮಾಡುವ ನಿದ್ರೆಯನ್ನು ಆಯುರ್ವೇದದಲ್ಲಿ ಕಾಲರಾತ್ರಿಗೆ ಹೋಲಿಸಲಾಗಿದೆ. ಇಂತಹ ಜೀವನಶೈಲಿ ದೇಹದ ವಾತ, ಪಿತ್ತ ಮತ್ತು ಕಫ ಸಮತೋಲನವನ್ನು ಹಾಳುಮಾಡಿ, ಜೀರ್ಣಕ್ರಿಯೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಶಾಂತ ಮನಸ್ಸಿನಿಂದ ಆಹಾರ ಸೇವಿಸುವುದು, ನಿಯಮಿತ ನಿದ್ರೆ ಹಾಗೂ ಶಿಸ್ತಿನ ಜೀವನಶೈಲಿಯೇ ಆರೋಗ್ಯಕರ ಬದುಕಿನ ನಿಜವಾದ ರಹಸ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.