ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ದಾರ್ಶನಿಕ: ಸಾಹಿತಿ ಮಾರುತಿ ಶಿಡ್ಲಾಪೂರ

KannadaprabhaNewsNetwork | Published : May 1, 2025 12:52 AM

ಸಾರಾಂಶ

ನಿಮ್ಮ ಸ್ವಂತ ಗೌರವಕ್ಕೆ ಹೋರಾಡುವುದನ್ನು ಬಿಟ್ಟು, ಸಾಮಾಜಿಕ ಗೌರವಕ್ಕೆ ಹೋರಾಡಿ ಹಾಗೂ ದಿನನಿತ್ಯ ಬಸವಣ್ಣನವರ ವಚನಗಳನ್ನು ಒಂದೊಂದು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಹಾವೇರಿ: ಕಾಯಕ, ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯ ದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ದಾರ್ಶನಿಕ ಬಸವೇಶ್ವರರು. ಅವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಯುವಜನತೆ ಮಾಡಬೇಕಾಗಿದೆ ಎಂದು ಸಾಹಿತಿ ಮಾರುತಿ ಶಿಡ್ಲಾಪೂರ ತಿಳಿಸಿದರು.ನಗರದ ಹೊರವಲಯದಲ್ಲಿರುವ ಕೆರಿಮತ್ತಿಹಳ್ಳಿ ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಜರುಗಿದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ; ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ! ಎಂಬ ವಚನವನ್ನು ನಾವು ದಿನನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ನಿಮ್ಮ ಸ್ವಂತ ಗೌರವಕ್ಕೆ ಹೋರಾಡುವುದನ್ನು ಬಿಟ್ಟು, ಸಾಮಾಜಿಕ ಗೌರವಕ್ಕೆ ಹೋರಾಡಿ ಹಾಗೂ ದಿನನಿತ್ಯ ಬಸವಣ್ಣನವರ ವಚನಗಳನ್ನು ಒಂದೊಂದು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕುಲಸಚಿವ ಎಸ್.ಟಿ. ಬಾಗಲಕೋಟಿ, ಉಪ ಕುಲಸಚಿವ ಡಾ. ಮನೋಹರ ಕೋಳಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರವೀಂದ್ರಕುಮಾರ ಬಣಕಾರ ಸೇರಿದಂತೆ ವಿವಿಯ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶೃತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಚೈತ್ರಾ ಸ್ವಾಗತಿಸಿದರು, ಪುಟ್ಟಸ್ವಾಮಿ ಎಚ್.ಬಿ. ನಿರೂಪಿಸಿದರು. ಸ್ವಾತಿ ವಂದಿಸಿದರು.ಸಮ ಸಮಾಜಕ್ಕೆ ಶ್ರಮಿಸಿದ್ದ ಬಸವಣ್ಣ

ರಾಣಿಬೆನ್ನೂರು: ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಪಾರವಾಗಿ ಶ್ರಮಿಸಿದ್ದರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.

ತಾಲೂಕು ಘಟಕದ ಅಧ್ಯಕ್ಷ ರಮೇಶ ಮಾಕನೂರ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಣ್ಣ ಗುಡಿಮುಂದ್ಲರ, ಕಾರ್ಮಿಕ ಘಟಕದ ಅಧ್ಯಕ್ಷ ಮಾಲತೇಶ ಬಡಿಗೇರ, ನಾಗರಾಜ ಅಜ್ಜನವರ, ಇಬ್ರಾಹಿಂ ಎಲ್ಗಚ್ಚ, ಚನ್ನವೀರಪ್ಪ ಬಡಿಗೇರ, ಉದಯಕುಮಾರ ಗೋಣೀರ, ಶಿವನಗೌಡ ಕಡೂರ, ಕಸ್ತೂರಿ ಅರ್ಕಸಾಲಿ, ಐಶ್ವರ್ಯ ಮಡಿವಾಳರ, ಪೂಜಾ ದೈವಜ್ಞ, ಉಷಾ ಜಡಮಲಿ ಮತ್ತಿತರರಿದ್ದರು.

Share this article