ಮಡಿಕೇರಿ: ಬದಲಾಗುತ್ತಿರುವ ಕಾನೂನು ಕಾಯಿದೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀಯೋರ್ವ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸಿ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಕರೆ ನೀಡಿದ್ದಾರೆ. ನಗರದ ಫಾರ್ಮಾ ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿಂದ ಆಯೋಜಿತವಾಗಿದ್ದ ವಿಶ್ವ ಔಷಧಿ ತಜ್ಞರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಘಕ್ಕೆ ಸ್ವಂತ ಭವನ ನಿರ್ಮಾಣವಾಗಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳು, ಸಭೆಗಳನ್ನು ಆಯೋಜಿಸುತ್ತಾ ಸಮಾಜಮುಖಿಯಾಗಿ ಸಂಘವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಜಯ್ ರಾಜ್ ಷಾ ಮಾತನಾಡಿ, ಔಷಧಿ ಮಾರಾಟದ ಹಲವಾರು ಕಾನೂನುಗಳು ಕೂಡ ಬದಲಾಗುತ್ತಲೇ ಇವೆ. ಇಂಥ ಕಾನೂನು ನಿಯಮಗಳ ಬಗ್ಗೆ ಕಾಲಕಾಲಕ್ಕೆ ತಿಳಿಯುವುದು ಔಷಧಿ ವ್ಯಾಪಾರಸ್ಥರ ಕರ್ತವ್ಯ ಎಂದರಲ್ಲದೇ, ಕಾನೂನು ಪಾಲನೆ ಮಾಡುವ ಮೂಲಕ ಸರ್ಕಾರದ ಕಾನೂನುಗಳನ್ನು ಗೌರವಿಸಿ ಎಂದು ಸೂಚಿಸಿದರು.ಕೊಡಗು ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾದಿಕಾರಿ ಡಾ. ಕರುಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ರಕ್ತದಾನ ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತವನ್ನು ಸಂಗ್ರಹಿಸುವ ಅನಿವಾರ್ಯತೆಯಿದೆ ಎಂದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಖಜಾಂಜಿ ಪ್ರಸಾದ್ ಗೌಡ ಅತಿಥಿ ಪರಿಚಯ ಮಾಡಿ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ನಿರೂಪಿಸಿದರು. ರಮ್ಯ ಪ್ರಸಾದ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಟಿ. ಪುರುಷೋತ್ತಮ್ ಇದ್ದರು.